ಬೆಂಗಳೂರು: ಬಕ್ರೀದ್ ಆಚರಣೆಗಾಗಿ ದೇಶಾದ್ಯಂತ ಮುಸ್ಲಿಂರು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಆನ್‌ಲೈನ್ ನಲ್ಲೂ ಕುರಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಬಕ್ರೀದ್ ಹಬ್ಬದ ಅಂಗವಾಗಿ ಬಲಿದಾನದ ಸಂಕೇತವಾಗಿ ಕುರಿಗಳನ್ನ ಬಲಿ ನೀಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಈ ಬಾರಿ ಗ್ರಾಹಕರ ಅನುಕೂಲಕಾಗಿ ಆನ್‌ಲೈನ್ ನಲ್ಲೂ ಕುರಿಗಳ ಮಾರಾಟ ಆರಂಭವಾಗಿದೆ.
ಓಎಲ್ಎಕ್ಸ್, ಕ್ವೀಕರ್ ಸೇರಿದಂತೆ ಹಲವು ವೆಬ್ಸೈಟ್ನಲ್ಲಿ ಕುರಿಯ ಚಿತ್ರ ಸೇರಿದಂತೆ ಎಲ್ಲಾ ಮಾಹಿತಿ ಹಾಕಲಾಗಿದ್ದು, ದರ ನಿಗದಿಪಡಿಸಲಾಗಿದೆ. ಗ್ರಾಹಕರು ಆನ್‌ಲೈನ್ ಮೂಲಕವೇ ಕುರಿಗಳನ್ನು ಖರೀದಿಸುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲೂ ಕುರಿಗಳ ಖರೀದಿ ಜೋರಾಗಿದ್ದು, ಬೆಲೆ ಗಗನಕ್ಕೇರಿದೆ. ಈದ್ಗಾ ಮೈದಾನದಲ್ಲಿ ಕುರಿಗಳ ವ್ಯಾಪಾರ ಬರದಿಂದ ಸಾಗಿದ್ದು, ಬನ್ನೂರು ತಳಿಯ ಕುರಿಗಳಿಗೆ ಭಾರೀ ಬೇಡಿಕೆ ನಿರ್ಮಾಣವಾಗಿದೆ.
ಬನ್ನೂರು ಕುರಿಗಳು ತಲಾ 6 ಸಾವಿರದಿಂದ 2 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿದೆ. ಇನ್ನು ಜಮ್ನಾಪುರಿ, ಮಂಡ್ಯ, ಹೊಸಕೋಟೆ, ಚಿತ್ರದುರ್ಗ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಕುರಿಗಳು ಮಾರುಕಟ್ಟೆಗೆ ಬಂದಿವೆ.