ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ವಿಷವುಣಿಸಿ ಕೊಲ್ಲಲಾಯಿತೆ?

ನೇತಾಜಿ ಸುಭಾಶ್ ಚಂದ್ರ ಬೋಸ್ ನಿಗೂಢ ಸಾವಿನ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ತಮ್ಮ ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ...
ಲಾಲ್ ಬಹದ್ದೂರ್ ಶಾಸ್ತ್ರಿ
ಲಾಲ್ ಬಹದ್ದೂರ್ ಶಾಸ್ತ್ರಿ

ನವದೆಹಲಿ: ನೇತಾಜಿ ಸುಭಾಶ್ ಚಂದ್ರ ಬೋಸ್ ನಿಗೂಢ ಸಾವಿನ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ತಮ್ಮ ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಶಾಸ್ತ್ರಿ ಪುತ್ರ ಅನಿಲ್ ಶಾಸ್ತ್ರಿ ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಾಸ್ತ್ರಿ ಸಾವಿನ ಬಗ್ಗೆ ಎನ್ ಡಿಎ ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿರುವ ಅನಿಲ್ ಶಾಸ್ತ್ರಿ, ದೇಶದ ಬಹುಸಂಖ್ಯೆಯ ಜನರು ನನ್ನ ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನನ್ನ ತಂದೆಯದ್ದು ಸಹಜ ಸಾವಲ್ಲ. ಅವರು ಸಾವನ್ನಪ್ಪಿದಾಗ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಅಲ್ಲದೇ ರಷ್ಯಾದ ಹೋಟೆಲ್ ನಲ್ಲಿ ತಂಗಿದ್ದ ಅವರ ಖಾಸಗಿ ಡೈರಿ ಕೂಡಾ ನಾಪತ್ತೆಯಾಗಿತ್ತು ಎಂದು ಅನಿಲ್ ತಿಳಿಸಿದ್ದಾರೆ.

ತಂದೆ ರಷ್ಯಾದ ತಾಷ್ಕೆಂಟ್ ನಲ್ಲಿ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಈಗಲೂ ಬೆಲ್ ಆಗಲಿ ಟೆಲಿಫೋನ್ ವ್ಯವಸ್ಥೆಯಾಗಲಿ ಇಲ್ಲ ಎಂದು ತಿಳಿಸಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ತುಂಬಾ ನಿರ್ಲಕ್ಷ್ಯ ಮಾಡಿರುವುದಾಗಿ ಶಾಸ್ತ್ರಿ ಪುತ್ರ ಆರೋಪಿಸಿದ್ದಾರೆ.

ತನ್ನ ಗಂಡನ ಸಾವು ಸಹಜವಾದುದಲ್ಲ ಎಂಬುದಾಗಿ ನನ್ನ ತಾಯಿ ಕೂಡಾ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ತಂದೆ ಸಾವನ್ನಪ್ಪಿದಾಗ ಭಾರತ ಸರ್ಕಾರ ಯಾಕೆ ಪೋಸ್ಟ್ ಮಾರ್ಟಮ್ ಮಾಡಲು ರಷ್ಯಾ ಸರ್ಕಾರಕ್ಕೆ ಮನವಿ ಮಾಡಿಲ್ಲ ಎಂದು ಪ್ರಶ್ಲಿಸಿದ್ದಾರೆ.

ಆ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಶಾಸ್ತ್ರಿ ಅವರ ಸಾವಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಬಹಿರಂಗೊಳಿಸುವ ಮೂಲಕ ಅವರ ಸಾವಿನ ಸುತ್ತ ಹಬ್ಬಿರುವ ಅನುಮಾನಗಳಿಗೆ ತೆರೆ ಎಳೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅನಿಲ್ ಶಾಸ್ತ್ರಿ ಮನವಿ ಮಾಡಿಕೊಂಡಿದ್ದಾರೆ.

ಶಾಸ್ತ್ರೀಜಿಗೆ ವಿಷವುಣಿಸಿ ಕೊಲ್ಲಲಾಯಿತೆ?
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ 1966ರಲ್ಲಿ ರಷ್ಯಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪಾಕಿಸ್ತಾನ ಜೊತೆಗಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಗಂಟೆಗಳ ಬಳಿಕ ಶಾಸ್ತ್ರಿ ಜೀ ರಷ್ಯಾದ ತಾಷ್ಕೆಂಟ್ ನಲ್ಲಿ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಸಾವನ್ನಪ್ಪಿದ್ದರು.

1966 ಜನವರಿ 11ರಂದು ಶಾಸ್ತ್ರಿಜೀ ಮರಣಹೊಂದಿದ್ದರು. ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ. ಆದರೆ ಶಾಸ್ತ್ರೀಜಿ ಕುಟುಂಬ ಇದು ನಮ್ಮನ್ನು ಮೂರ್ಖರನ್ನಾಗಿಸುವ ಹೇಳಿಕೆ ಎಂದೇ ವಾದಿಸುತ್ತಿದೆ. ಶಾಸ್ತ್ರಿಗಳ ಸಾವಿಗೆ ಸಂಬಂಧಪಟ್ಟ ದಾಖಲೆ ಬಹಿರಂಗಕ್ಕೆ ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರೂ ಕೂಡಾ ಹಿಂದಿನ ಯುಪಿಎ ಸರ್ಕಾರ ಯಾವುದೇ ಮಾಹಿತಿ ಕೊಟ್ಟಿಲ್ಲವಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ವಿಷವುಣಿಸಿ ಸಾಯಿಸಲಾಯಿತೆ ಎಂಬ ಅನುಮಾನ ಈ ಹಿಂದಿನಿಂದಲೂ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com