ಕಳಂಕಿತರಿಗೆ ಟಿಕೆಟ್ ಮಾರಾಟ

ಚುನಾವಣಾ ಟಿಕೆಟ್‍ಗಳನ್ನು ಹಣಕ್ಕೆ ಮಾರಿಕೊಳ್ಳಲಾಗಿದೆ ಎಂದು ಪಕ್ಷದ ಸಂಸದರೇ ಆರೋಪಿಸುವ ಮೂಲಕ ಬಿಜೆಪಿಯ...
ಆರ್ ಕೆ ಸಿಂಗ್
ಆರ್ ಕೆ ಸಿಂಗ್
Updated on

ಪಟನಾ: ಚುನಾವಣಾ ಟಿಕೆಟ್‍ಗಳನ್ನು ಹಣಕ್ಕೆ ಮಾರಿಕೊಳ್ಳಲಾಗಿದೆ ಎಂದು ಪಕ್ಷದ ಸಂಸದರೇ ಆರೋಪಿಸುವ ಮೂಲಕ ಬಿಜೆಪಿಯ ಬಿಹಾರ ಚುನಾವಣಾ ಟಿಕೆಟ್ ಹಂಚಿಕೆ ವಿವಾದ ಹೊಸ ತಿರುವು ಪಡೆದಿದ್ದು, ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಗೆ ಮುಖಂಡರು ಪಕ್ಷದ ಟಿಕೆಟ್ ಮಾರಿದ್ದಾರೆ ಎಂದು ಸಂಸದ ಆರ್ ಕೆ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಮಾಜಿ ಅಧಿಕಾರಿಯೂ ಆಗಿರುವ ಆರಾ ಸಂಸದ ಸಿಂಗ್, ಪಕ್ಷದ ಜನಪರ ಹಾಲಿ ಶಾಸಕರು ಹಾಗೂ ಅರ್ಹ ಮುಖಂಡ ರನ್ನು ಕಡೆಗಣಿಸಿ, ಹಣಬಲವಿರುವ ಕಳಂಕಿತ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಪಕ್ಷದ ರಾಜ್ಯ ನಾಯಕರು ಪಕ್ಷದ ಪ್ರಾಮಾಣಿಕರನ್ನು ಮೂಲೆಗೊತ್ತಿ, ಅಪರಾಧಿಗಳಿಗೆ ಮಣೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಕಳಂಕಿತರಿಗೆ ಟಿಕೆಟ್ ನೀಡುವುದಾದರೆ ನಿಮಗೂ(ಬಿಜೆಪಿ) ಲಾಲು ಯಾದವರಿಗೂ ಏನು ವ್ಯತ್ಯಾಸ ಎಂದು ಪಕ್ಷದ ರಾಷ್ಟ್ರೀಯ ನಾಯಕರನ್ನು ಪ್ರಶ್ನಿಸಿರುವ ಸಿಂಗ್, ಅರ್ಹರಿಗೆ ಟಿಕೆಟ್ ವಂಚಿಸುವ ಮೂಲಕ ನಾಯಕರು ಜನತೆಗೆ ಅನ್ಯಾಯವೆಸಗಿದ್ದಾರೆ ಎಂದಿದ್ದಾರೆ.

ನಾಯಕರ ಈ ನಡೆ ಪಕ್ಷದ ಕಾರ್ಯ ಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಟಿಕೆಟ್ ವಂಚಿತ ಹಲವು ಜನಪ್ರಿಯ ನಾಯಕರು ಪಕ್ಷ ತೊರೆದಿದ್ದಾರೆ. ಕಳಂಕಿತರನ್ನು ಮುಂದಿಟ್ಟು ಕೊಂಡು ಮತ ಯಾಚನೆಗೆ ಹೋದರೆ ಜನಬೆಂಬಲ ಸಿಗುವುದೇ ಎಂದಿರುವ ಸಿಂಗ್, ಜನ ಉತ್ತಮ ಆಡಳಿತಕ್ಕಾಗಿ ನಿಮ್ಮ ಮೇಲೆ ಭರವಸೆ ಇಟ್ಟಿದ್ದಾರೆಂದರೆ ಅವರ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕು. ಆದರೆ, ನೀವು ನೀಡುತ್ತಿರುವ ಉತ್ತಮ ಆಡಳಿತ ಇದೇನಾ? ಅಪರಾಧಿಗಳು, ಉತ್ತಮರ ನಡುವೆ ಜನ ಅಂತಿಮವಾಗಿ ಉತ್ತಮರನ್ನೇ ಆಯ್ಕೆಮಾಡುವುದು ಎಂಬುದನ್ನು ಪಕ್ಷ ಮರೆಯಬಾರದು ಎಂದು ಹೇಳಿದ್ದಾರೆ.

ಟಿಕೆಟ್ ಹಂಚಿಕೆ ವಿಷಯದಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಲು ಪಕ್ಷದ ನಾಯಕ ಹಾಗೂ ಸಿಎಂ ಅಭ್ಯರ್ಥಿ ಸುಶೀಲ್ ಕುಮಾರ್ ಮೋದಿ ಜತೆ ಮಾತಾಡಲು ಯತ್ನಿಸಿದ್ದು, ಅವರು ತಮ್ಮ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕಡೆ ಟಿಕೆಟ್ ಮಾರಿಕೊಂಡಿರುವ ಅಂಶ ತಮ್ಮ ಕ್ಷೇತ್ರ ಭೇಟಿ ವೇಳೆ ಗಮನಕ್ಕೆ ಬಂದಿದೆ ಎಂದುಸಿಂಗ್ ಹೇಳಿದ್ದಾರೆ.

ಟಿಕೆಟ್ ಹಂಚಿಕೆ ಗೊಂದಲದಿಂದ ಬೇಸತ್ತು ಬಿಹಾರ ಬಿಜೆಪಿ ಹಿರಿಯ ನಾಯಕ ಚಂದ್ರಮೋಹನ್ ರಾಯ್ 2 ದಿನಗಳ ಹಿಂದಷ್ಟೇ ಪಕ್ಷದ ಎಲ್ಲ ಸ್ಥಾನ ಮಾನಗಳಿಗೆ ರಾಜಿನಾಮೆ ನೀಡಿದ ಬೆನ್ನಲ್ಲೇ ಸಂಸದ ಆರ್ ಕೆ ಸಿಂಗ್ ಆರೋಪ ಗಂಭೀರ ಸ್ವರೂಪ ಪಡೆದಿದ್ದು, ಪಕ್ಷದ ನಾಯಕತ್ವಕ್ಕೆ ಭಾರಿ ಇರಿಸು ಮುರಿಸು ಉಂಟಾಗಿದೆ. ಬಿಜೆಪಿ ಮಿತ್ರ ಪಕ್ಷ ಎಲ್‍ಜೆಪಿ ಕೂಡ ಸಿಂಗ್ ಆರೋಪಕ್ಕೆ ದನಿಗೂಡಿಸಿದ್ದು, ಕಳಂಕಿತರಿಗೆ ಟಿಕೆಟ್ ನೀಡುವುದು ಸಲ್ಲದು ಎಂದು ಪಕ್ಷದ ನಾಯಕ ಚಿರಾಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com