ಗೋಮಾಂಸ ಸೇವನೆ ಶಂಕೆ: ಮುಸ್ಲಿಂ ಕುಟುಂಬದ ಮೇಲೆ ದಾಳಿ, ಓರ್ವ ಸಾವು

ಗೋಮಾಂಸ ಸೇವನೆ ಮಾಡುತ್ತಿದ್ದಾರೆಂಬ ಶಂಕೆಯಿಂದಾಗಿ ಮುಸ್ಲಿಂ ಕುಟುಂಬವೊಂದರ ಮೇಲೆ ದಾಳಿ ಮಾಡಿರುವ ಗುಂಪೊಂದು 50ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ದಾದ್ರಿ (ಉತ್ತರ ಪ್ರದೇಶ): ಗೋಮಾಂಸ ಸೇವನೆ ಮಾಡುತ್ತಿದ್ದಾರೆಂಬ ಶಂಕೆಯಿಂದಾಗಿ ಮುಸ್ಲಿಂ ಕುಟುಂಬವೊಂದರ ಮೇಲೆ ದಾಳಿ ಮಾಡಿರುವ ಗುಂಪೊಂದು 50ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಮ್ಮದ್ ಇಕ್ಲಾಕ್ (50) ಎಂಬುವವರೇ ಹತ್ಯೆಗೀಡಾದ ವ್ಯಕ್ತಿ. ಕೆಲವು ದಿನಗಳ ಹಿಂದಷ್ಟೇ ಊರಿನಲ್ಲಿದ್ದ ಹಸುಗಳು ನಾಪತ್ತೆಯಾಗಿದ್ದವು. ನಾಪತ್ತೆಯಾದ ಹಸುಗಳ ಮೃತ ದೇಹವು ಊರಿನಲ್ಲಿರುವ ಟ್ರಾನ್ಸ್ ಫಾರ್ಮರ್ ಬಳಿ ಬಿದ್ದಿದೆ ಎಂದು ದೇಗುಲವೊಂದರಲ್ಲಿ ಘೋಷಣೆ ಮಾಡಲಾಗಿದೆ. ಊರಿನಲ್ಲಿದ್ದ ಮುಸ್ಲಿಂ ಕುಟುಂಬಸ್ಥರು ಇತ್ತೀಚಗಷ್ಟೇ ಕಾರಣಾಂತರಗಳಿಂದ ಊರು ಬಿಟ್ಟು ಹೋಗಿದ್ದರು. ಊರಿನಲ್ಲಿ ಮುಸ್ಲಿಂ ಸಮುದಾಯದ ಎರಡು ಕುಟುಂಬಸ್ಥರು ಮಾತ್ರ ನೆಲೆಯೂರಿದ್ದರು. ಹೀಗಾಗಿ ಹಸುಗಳನ್ನು ಹತ್ಯೆ ಮಾಡಿರುವುದು ಇಕ್ಲಾಕ್ ಮನೆಯವರೇ ಇರಬಹುದು ಎಂಬ ಶಂಕೆಯಿಂದಾಗಿ ದೇಗುಲದಲ್ಲಿ ಬಂದ ಘೋಷಣೆ ಕೇಳಿದ ಗುಂಪೊಂದು ಇದ್ದಕ್ಕಿದ್ದಂತೆ ಇಕ್ಲಾಕ್ ಮನೆಯ ಮೇಲೆ ಸೋಮವಾರ ರಾತ್ರಿ 10.30ರ ಸುಮಾರಿಗೆ ದಾಳಿ ನಡೆಸಿದೆ.

ದಾಳಿ ವೇಳೆ ಇಕ್ಲಾಕ್ ಹಾಗೂ ಆತನ (22) ವರ್ಷದ ಮಗನಿದ್ದುದ್ದನ್ನು ಕಂಡ ಗುಂಪು ಇಕ್ಲಾಕ್ ನನ್ನು ಮನಬಂದಂತೆ ಥಳಿಸಿ ಹತ್ಯೆಗೈದಿದೆ. ನಂತರ ಆತನ ಮಗನನ್ನು ಮನಬಂದಂತೆ ಥಳಿಸುತ್ತಿದ್ದಾಗ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ನಂತರ ದಾಳಿದ ಸುಮಾರು 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಲ್ಲಿನ ಸ್ಥಳೀಯರು  ಸ್ಥಳದಲ್ಲಿ ಸಾಕಷ್ಟು ಬಿಗುವಾತಾವರಣ ನಿರ್ಮಿಸಿದ್ದಾರೆ. ಜನರನ್ನು ನಿಯಂತ್ರಿಸುವ ಸಲುವಾಗಿ ನಂತರ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಪೊಲೀಸರ ಗುಂಡಿನ ದಾಳಿ ವೇಳೆ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ನಾವು ಯಾವ ಗೋಮಾಂಸವನ್ನು ತಿಂದಿಲ್ಲ. ನಮ್ಮ ಮನೆಯ ಫ್ರಿಡ್ಜ್ ನಲ್ಲಿರುವುದು ಕುರಿಮಾಂಸವಷ್ಟೇ. ಅದೂ ಕೂಡ ನಾವು ತಂದಿದ್ದಲ್ಲ. ನಮ್ಮ ಸಂಬಂಧಿಕರೊಬ್ಬರು ಬಕ್ರೀದ್ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ನೀಡಿದ್ದು ಎಂದು ಹತ್ಯೆಗೀಡಾದ ಇಕ್ಲಾಕ್ ನ ಮಗಳು ಪೊಲೀಸರ ಬಳಿ ಹೇಳಿದ್ದಾಳೆ.

ಯುವತಿ ನೀಡಿದ ಮಾಹಿತಿ ಅನ್ವಯ ತನಿಖೆ ಆರಂಭಿಸಿರುವ ಪೊಲೀಸರು ಇದೀಗ ಇಕ್ಲಾಕ್ ಮನೆಯಲ್ಲಿದ್ದ ಮಾಂಸವನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾದುಕುಳಿತಿದ್ದಾರೆ.

ಇದೀಗ ಘಟನೆ ಸಮಾಜಿಕ ಜಾಲತಾಣದಾದ್ಯಂತ ಸಾಕಷ್ಟು ಗುಮಾನಿಯನ್ನುಂಟು ಮಾಡುತ್ತಿದ್ದು, ಕೋಮುಗಲಭೆ ಹುಟ್ಟುಹಾಕುವಂತಹ ಸನ್ನಿವೇಶವನ್ನು ಸೃಷ್ಟಿಸುತ್ತಿವೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಅಲ್ಲಿನ ಜಿಲ್ಲಾಧಿಕಾರಿ ಎನ್ ಪಿ ಸಿಂಗ್ ಅವರು, ಸಮುದಾಯಗಳ ವಿರುದ್ಧ ಅಂತರ್ಜಾಲದ ಮೂಲಕವಾಗಲೀ ಅಥವಾ ಇನ್ನಾವುದೇ ಮಾಧ್ಯಮದ ಮೂಲಕವಾಗಲೀ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದು, ಈ ರೀತಿಯ ಪ್ರಯತ್ನಗಳನ್ನು ಮಾಡದಿರುವಂತೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com