

ನವದೆಹಲಿ: ವಿವಿಧ ತೆರಿಗೆದಾರರ ಸ್ವರ್ಗವೆಂದೇ ಕುಖ್ಯಾತಿ ಹೊಂದಿರುವ ಪನಾಮಾದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರು ಕಾನೂನು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಲೆಕ್ಕಕ್ಕೆ ಸಿಗದ ಸಂಪತ್ತನ್ನು ಭಾರತಕ್ಕೆ ವಾಪಾಸು ತರುವ ಬಗ್ಗೆ ಕೇಂದ್ರ ಸರ್ಕಾರ ಮುಂದಿನ ವರ್ಷ ಕಾರ್ಯನಿರತವಾಗಲಿದೆ. ಆಗ ತಮ್ಮ ಸಂಪತ್ತನ್ನು ಮುಚ್ಚಿಡಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಜಿ 20 ಉಪಕ್ರಮಗಳು, ಫಾಟ್ಕಾ ಮತ್ತು ದ್ವಿಪಕ್ಷೀಯ ವ್ಯವಹಾರ 2017ರಿಂದ ಜಾರಿಗೆ ಬರಲಿದ್ದು, ಇನ್ನಷ್ಟು ಪಾರದರ್ಶಕ ಸಂಸ್ಥೆಗಳು ಅಸ್ತಿತ್ವಕ್ಕೆ ಬರಲಿವೆ. ಹಾಗಾಗಿ ತೆರಿಗೆ ಕಟ್ಟದೆ ಮೋಸ ಮಾಡುವವರು ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ಬಜೆಟ್ ಮಂಡಿಸುವ ಸಂದರ್ಭದಲ್ಲಿ, ವಿದೇಶಗಳಲ್ಲಿ ಆಸ್ತಿ, ಸಂಪತ್ತು ಹೊಂದಿದ್ದು, ಅದನ್ನು ಘೋಷಿಸದಿರುವವರಿಗೆ ಈ ವರ್ಷ ಅವಕಾಶ ನೀಡಿದ್ದೆವು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡು ತೆರಿಗೆ ಕಟ್ಟಿದವರು ಕೆಲವರಷ್ಟೆ ಎಂದು ಸಚಿವರು ಹೇಳಿದರು.