
ನವದೆಹಲಿ: ವಿಶ್ವದಲ್ಲಿರುವ ಶ್ರೀಮಂತ ಮತ್ತು ಪ್ರಖ್ಯಾತ ವ್ಯಕ್ತಿಗಳ ವಿದೇಶ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಸಾಮೂಹಿಕ ಲಕ್ಷಾಂತರ ದಾಖಲೆಗಳು ಸೋರಿಕೆಯಾಗಿದೆ, ಇದರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ನವಾಜ್ ಷರೀಫ್, ಲಿಯೋನೆಲ್ ಮೆಸ್ಸಿ ಸೇರಿದಂತೆ 500 ಮಂದಿ ಭಾರತೀಯರು, ಮುಂಬೈ ಭೂಗತ ಪಾತಕಿಗಳ ಹೆಸರುಗಳು ಕೇಳಿಬರುತ್ತಿವೆ.
ಹಲವು ಮಾಧ್ಯಮ ಸಮೂಹಗಳೊಂದಿಗೆ ಜಾಗತಿಕ ತನಿಖಾ ಸಂಸ್ಥೆ ರಹಸ್ಯವಾಗಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಹೊರಹಾಕಿದೆ. ಸುಮಾರು 300 ಪತ್ರಕರ್ತರು ಸೇರಿ ಕಳೆದ 40 ವರ್ಷಗಳಲ್ಲಿ ಗಣ್ಯರ ವ್ಯಾಪಾರ, ವಹಿವಾಟುಗಳ ಕುರಿತು ತನಿಖೆ ನಡೆಸಿದ್ದಾರೆ. ಪನಾಮಾ ಮೂಲದ ಕಾನೂನು ಸಂಸ್ಥೆ ಮೊಸ್ಸಾಕ್ ಫೊನ್ಸಿಕಾ ಗಣ್ಯ ವ್ಯಕ್ತಿಗಳಿಗೆ ಸಹಾಯ ಮಾಡಿದೆ ಎಂದು ತಿಳಿದುಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕಳೆದ 8 ತಿಂಗಳಿನಲ್ಲಿ 36 ಸಾವಿರ ದಾಖಲೆಗಳನ್ನು ಹೊರಹಾಕಲಾಗಿದ್ದು ಅದರಲ್ಲಿ 500 ಭಾರತೀಯರ ಹೆಸರುಗಳಿವೆ. ವಿದೇಶಿ ಕಂಪೆನಿಗಳು, ಸಂಸ್ಥೆಗಳು, ಟ್ರಸ್ಟ್ ಗಳಲ್ಲಿ ಹಣ ಹೂಡಿ ತೆರಿಗೆ ಕಟ್ಟದೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪತ್ರಿಕೆ ಪಟ್ಟಿಯಲ್ಲಿ ಸೂಚಿಸಿರುವ ಹೆಸರುಗಳ ವಿಳಾಸವನ್ನು ಖಾತರಿಪಡಿಸಿದೆ.
ಭಾರತೀಯರಿಗೆ 2003ಕ್ಕೆ ಮೊದಲು ಸಾಗರೋತ್ತರ ಘಟಕಗಳ ತೆರೆಯುವಿಕೆಗೆ ಅವಕಾಶಗಳಿರಲಿಲ್ಲ. 2004ರಲ್ಲಿ ಮೊದಲ ಬಾರಿಗೆ ವಿದೇಶಗಳಿಗೆ ಮಿತಿಯ ಹಣವನ್ನು ಕಳುಹಿಸಲು ಅವಕಾಶ ನೀಡಲಾಗಿತ್ತು.
2013ರಲ್ಲಿ ಕಾನೂನು ಬದಲಾಗಿ ವಿದೇಶಗಳಲ್ಲಿ ಅಂಗಸಂಸ್ಥೆಗಳನ್ನು ಹೊಂದಬಹುದು ಅಥವಾ ಜಂಟಿಯಾಗಿ ಹೂಡಿಕೆ ಮಾಡಬಹುದು ಎಂದು ಕಾನೂನು ತರಲಾಯಿತು.
ಭಾರತ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತರುವ ಬಗ್ಗೆ ಹೊಸ ವರದಿ ಸಿದ್ದಪಡಿಸುತ್ತಿರುವ ಹೊತ್ತಿನಲ್ಲಿ ಪನಾಮಾ ಪೇಪರ್ಸ್ ಸೋರಿಕೆಯಾಗಿದೆ. ವಿದೇಶಗಳಲ್ಲಿರುವ ಸಂಪತ್ತು ಮತ್ತು ಹಣದ ವಿವರಗಳನ್ನು ನೀಡಲು 90 ದಿನಗಳ ಅನುಸರಣೆ ಯೋಜನೆ(ಕಾಂಪ್ಲಿಯನ್ಸ್ ಸ್ಕೀಮ್) ಕಳೆದ ಸೆಪ್ಟೆಂಬರ್ ಗೆ ಮುಕ್ತಾಯಗೊಂಡಿದ್ದು, ಇದುವರೆಗೆ ಕೇವಲ 3 ಸಾವಿರದ 770 ಕೋಟಿ ರೂಪಾಯಿ ತರಲಾಗಿದೆಯಷ್ಟೆ.
ಪನಾಮಾ ಪೇಪರ್ಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಪಾಕಿಸ್ತಾನ ಪ್ರಧಾನಿ ನವಾಸ್ ಷರೀಫ್, ಸೌದಿ ಅರೇಬಿಯಾ ದೊರೆ ಸೇರಿದಂತೆ ಅನೇಕ ಪ್ರಮುಖ ನಾಯಕರ ಹೆಸರು ಕೇಳಿಬರುತ್ತಿದೆ.
Advertisement