
ನವದೆಹಲಿ: ಭಾರತ್ ಮಾತಾ ಕಿ ಜೈ ಘೋಷಣೆ ಕುರಿತಂತೆ ಕೇಳಿಬರುತ್ತಿರುವ ವಾದ-ವಿವಾದಗಳು ಇನ್ನೂ ನಿಲ್ಲುವ ಸ್ಥಿತಿ ಕಾಣುತ್ತಿಲ್ಲ.ಮೊನ್ನೆ ಭಾನುವಾರ ಮಾತನಾಡಿದ್ದ ಯೋಗ ಗುರು ರಾಮದೇವ್, ತಾವು ಈ ನೆಲದ ಕಾನೂನನ್ನು ಮತ್ತು ಸಂವಿಧಾನವನ್ನು ಗೌರವಿಸುತ್ತೇನೆ. ಆದರೆ, 'ಭಾರತ್ ಮಾತಾ ಕಿ ಜೈ' ಘೋಷಣೆ ಮಾಡಲು ನಿರಾಕರಿಸಿದ ಜನರ ಶಿರಚ್ಛೇದ ಮಾಡಬೇಕು ಎಂದು ಹೇಳಿದ್ದರು.
ರಾಮ್ ದೇವ್ ಹೇಳಿಕೆಗೆ ಕಾಂಗ್ರೆಸ್, ಆಪ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ರಾಮ್ ದೇವ್ ಮಾತಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಬಲ ಸೂಚಿಸಿದ್ದಾರೆ.
ಬಾಬಾ ರಾಮ್ ದೇವ್ ಅವರು ಬಿಜೆಪಿ ಸದಸ್ಯರಲ್ಲ. ಆದರೆ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರಲ್ಲಿ ನಾನು ಕೇಳ ಬಯಸುವುದೇನೆಂದರೆ ವಾಕ್ ಸ್ವಾತಂತ್ರ್ಯ ಬಾಬಾ ರಾಮ್ ದೇವ್ ಗೆ ಅನ್ವಯವಾಗುವುದಿಲ್ಲವೇ? ಎಂದು ಅಮಿತ್ ಷಾ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೇಳಿದ್ದಾರೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ.
ರಾಮ್ ದೇವ್ ಈ ಹಿಂದೆ ಸದ್ಭಾವನಾ ರ್ಯಾಲಿಯೊಂದರಲ್ಲಿ ಮಾತನಾಡಿ, ಟೋಪಿ ಧರಿಸುವವರು ಯಾರಾದರೊಬ್ಬರು ಎದ್ದು ನಿಂತು ಯಾರು ನನ್ನನ್ನು ಕೊಲ್ಲಲು ಬಂದರೂ ಕೂಡ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದರೆ ನಾನು ಅವರ ಶಿರಚ್ಛೇದ ಮಾಡಲು ಬಯಸುತ್ತೇನೆ. ಆದರೆ ನಮ್ಮ ದೇಶದ ಕಾನೂನಿನಲ್ಲಿ ಆ ಅವಕಾಶವಿಲ್ಲ. ನಾನು ಈ ನೆಲದ ಕಾನೂನನ್ನು ಗೌರವಿಸುತ್ತೇನೆ ಎಂದು ಹೇಳಿದ್ದರು.
Advertisement