ಮುಂಬೈ: ಕಳೆದೆರಡು ದಿನಗಳಿಂದ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಪನಾಮ ಪೇಪರ್ ಲೀಕ್ಸ್ ಪಟ್ಟಿಯಲ್ಲಿ ತಮ್ಮ ಹೆಸರಿರುವ ಆರೋಪವನ್ನು ತಳ್ಳಿ ಹಾಕಿದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು, ತಮ್ಮ ಬೆಂಬಲಕ್ಕೆ ನಿಂತ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ವಿದೇಶದಲ್ಲಿ ತೆರಿಗೆ ವಂಚಿಸಿ ಯಾರೆಲ್ಲಾ ಅಕ್ರಮ ಸಂಪತ್ತನ್ನು ಹೊಂದಿದ್ದಾರೆ ಎಂಬ ಮಾಹಿತಿ ಪನಾಮ ಪೇಪರ್ ಸೋರಿಯಿಂದ ಬಯಲಾಗಿತ್ತು. ಇದರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಹೆಸರು ಕೇಳಿಬಂದಿತ್ತು.
ಇದಾದ ಬಳಿಕ ಅಮಿತಾಬ್ ಬಚ್ಚನ್ ಅವರು ನನಗೂ ಪನಾಮ ಪೇಪರ್ಸ್ ದಾಖಲೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅಮಿತಾಬ್ ಬಚ್ಚನ್ ಗೆ ಬೆಂಬಲ ಸೂಚಿಸಿ ಅಭಿಮಾನಿಗಳು ಟ್ವಿಟರ್ ನಲ್ಲಿ 'ಐ ಆ್ಯಮ್ ವಿತ್ ಅಮಿತಾಬ್ ಬಚ್ಚನ್' ಎಂಬ ಟ್ರೆಂಡ್ ಆರಂಭಿಸಿದ್ದರು.
ಇದಕ್ಕೆ ಸಾಕಷ್ಟು ಅಭಿಮಾನಿಗಳು ಲೈಕ್ ನೀಡಿದ್ದರು. ಅಭಿಮಾನಿಗಳ ಬೆಂಬಲಕ್ಕೆ ಬಿಗ್ ಬಿ ಧನ್ಯವಾದ ತಿಳಿಸಿದ್ದು, ಇದೊಂದು ಹೃದಯಕ್ಕೆ ಧೈರ್ಯಕೊಡುವಂತದ್ದಾಗಿದ್ದು, ಎಲ್ಲರನ್ನು ನಾನು ಪ್ರೀತಿಸುತ್ತೇನೆ ಎಂದು ಅಮಿತಾಬ್ ತಿಳಿಸಿದ್ದಾರೆ.