ಶ್ರೀನಗರ: ಘರ್ಷಣೆಯಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಹಾಜರಾಗಬಹುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮಾನವ ಸಂಪನ್ಮೂಲ ಸಚಿವಾಲಯದ ತ್ರಿಸದಸ್ಯ ತಂಡ ಎನ್ಐಟಿ ಆವರಣಕ್ಕೆ ಭೇಟಿ ನೀಡಿದ ನಂತರ ಈ ನಿರ್ಧಾರ ಹೊರಬಿದ್ದಿದೆ. ಪರಿಸ್ಥಿತಿಯ ಅವಲೋಕನಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ತಂಡ ಪ್ರಕ್ಷುಬ್ಧತೆಯನ್ನು ನಿವಾರಿಸುವ ಸಲುವಾಗಿ ಚಳವಳಿ ನಿರತ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿತ್ತು.
ಎನ್ಐಟಿ ಆವರಣದಲ್ಲಿ ಅಭದ್ರತೆಯ ವಾತಾವರಣ ಇದೆ ಎಂದು ಹೊರಗಿನ ವಿದ್ಯಾರ್ಥಿಗಳು ಕೇಂದ್ರ ತಂಡಕ್ಕೆ ತಿಳಿಸಿದ್ದರು. ಅಲ್ಲದೆ ತಾವು ಸದ್ಯಕ್ಕೆ ತಮ್ಮ ಮನೆಗಳಿಗೆ ವಾಪಸಾಗಬಯಸಿದ್ದು, ತಮಗೆ ತಡವಾಗಿ ಪರೀಕ್ಷೆಗೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದರು.
ಕಳೆದ ವಾರ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡದೆದುರು ಪರಾಭವಗೊಂಡದ್ದನ್ನು ಅನುಸರಿಸಿ ಶ್ರೀನಗರದ ಎನ್‌ಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಗುಂಪು ಪರಸ್ಪರ ಹೊಡೆದಾಡಿಕೊಂಡ ಕಾರಣ ತೀವ್ರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.