ನವದೆಹಲಿ: ಪಠಾಣ್ ಕೋಟ್ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಯಾವುದೇ ಮಾತುಕತೆಗಳೂ ನಡೆದಿಲ್ಲ ಮತ್ತು ಹೊಸದಾಗಿ ಯಾವುದೇ ಸಭೆಗಳು ನಿಗದಿಯಾಗಿಲ್ಲ ಎಂದು ಹೇಳಿದ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ಭಾರತದ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ಆದರೆ ಮಾರ್ಚ್ ತಿಂಗಳಲ್ಲಿ ಎನ್‌ಐಎ ತಮ್ಮ ವೆಬ್‌ಸೈಟ್‌ನಲ್ಲಿ ಪಠಾಣ್‌ಕೋಟ್ ದಾಳಿ ಮಾಡಿದ ನಾಲ್ವರು ಉಗ್ರರ ಫೋಟೋ ಅಪ್‌ಲೋಡ್ ಮಾಡಿದ್ದಾಗ, ಪಾಕಿಸ್ತಾನದವರು ಉಗ್ರರ ಬಗ್ಗೆ ಮಾಹಿತಿಯನ್ನು ನೀಡಿದ್ದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಸರ್ಕಾರಿ ಅಧಿಕಾರಿಗಳ ಪ್ರಕಾರ ಪಾಕಿಸ್ತಾನ ಸೇರಿದಂತೆ ಹಲವಾರು ರಾಷ್ಟ್ರಗಳ ಪ್ರಜೆಗಳು ಹತ ಉಗ್ರರ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಈ ಮಾಹಿತಿಯಿಂದಾಗಿ ಆ ನಾಲ್ವರು ಉಗ್ರರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಪಾಕಿಸ್ತಾನದಿಂದ ಕಳುಹಿಸಿದ ಜಂಟಿ ತನಿಖಾ ದಳ ಭಾರತಕ್ಕೆ ಬಂದು ಇಲ್ಲಿ ತನಿಖೆ ನಡೆಸಿತ್ತು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹತರಾಗಿದ್ದ ನಾಲ್ವರು ಉಗ್ರರನ್ನು ಎನ್‌ಐಎ ಹಫೀಜ್ ಅಬುಬಕರ್, ಉಮರ್ ಫರೂಕ್, ನಾಸಿರ್ ಹುಸೈನ್, ಅಬ್ದುಲ್ ಖಯ್ಯಮ್ ಎಂದು ಗುರುತಿಸಿತ್ತು. ಅಷ್ಟೇ ಅಲ್ಲದೆ ಎನ್‌ಐಎ ಉಗ್ರರ ಕುಟುಂಬದ ಮೂಲ ಪತ್ತೆ ಹಚ್ಚುವುದಕ್ಕಾಗಿ ಹತರಾಗಿದ್ದ ಉಗ್ರರ ಡಿಎನ್‌ಎ ಸ್ಯಾಂಪಲ್‌ನ್ನು ಕೂಡಾ ಕೊಟ್ಟಿತ್ತು ಎಂದು ಹೇಳಲಾಗಿದೆ.