
ಅಹಮದಾಬಾದ್: ಫೇಸ್ ಬುಕ್ ನಲ್ಲಿ ಪರಿಚಯವಾದ ಅಮೆರಿಕಾ ಮಹಿಳೆ ಗುಜರಾತ್ ನ ಸ್ಲಂ ನಿವಾಸಿಯನ್ನು ವಿವಾಹವಾಗಿರುವ ಅಪರೂಪದ ಪ್ರಕರಣ ವರದಿಯಾಗಿದೆ. ಫೇಸ್ ಬುಕ್ ನಲ್ಲಿ ಹುಟ್ಟೋ ಪ್ರೇಮ ನಿಜವಲ್ಲ ಎಂದು ಮೂಗುಮುರಿಯುವ ಹೊತ್ತಿನಲ್ಲಿ ಈ ಪ್ರಕರಣ ನಿಜಕ್ಕೂ ಅಚ್ಚರಿ ಮೂಡಿಸಿದೆ.
ಗುಜರಾತ್ನ ಬೃಹತ್ ನಗರ ಅಹಮದಾಬಾದ್ನ ‘ಸ್ಲಂ ಬಾಯ್’ ಹಿತೇಶ್ (23) ಹಾಗೂ ಅಮೆರಿಕದ ಎಮಿಲಿ ಚಾವ್ಡಾ (41) ನಡುವಿನ ಫೇಸ್ಬುಕ್ ಪ್ರೇಮ ಪ್ರಹಸನ ಮದುವೆ ಮೂಲಕ ಅಂತ್ಯಗೊಂಡಿದೆ. ಎಮಿಲಿ ಹಿತೇಶ್ರನ್ನು ಕಣ್ಣಾರೆ ನೋಡಿದ್ದೇ ಮದುವೆಯಾದ ದಿನ ಅನ್ನೋದು ಇನ್ನೊಂದು ವಿಶೇಷ.
ಒಂದು ವರ್ಷದ ಹಿಂದೆ ನಿರುದ್ಯೋಗಿ ಹಿತೇಶ್ ಮತ್ತು ಎಮಿಲಿ ಫೇಸ್ಬುಕ್ನಲ್ಲಿ ಸ್ನೇಹಿತರಾದರು. ಹಿತೇಶ್ ಯಾರು, ಏನು ಎನ್ನುವ ವಿಚಾರ ಎಮಿಲಿಗೆ ಗೊತ್ತಿರಲಿಲ್ಲ. ಹಾಗೇ ಎಮಿಲಿ ಯಾರು, ಏನು ಅನ್ನೋದು ಹಿತೇಶ್ಗೆ ಗೊತ್ತಿರಲಿಲ್ಲ.
ಇಬ್ಬರ ನಡುವೆ ಹಾಯ್, ಬಾಯ್ ಸಂಭಾಷಣೆ ಅನೇಕ ದಿನಗಳ ತನಕ ಮುಂದುವರಿದಿತ್ತು. ಹಿತೇಶ್ ಹಿಂದಿಯಲ್ಲಿ ತನ್ನ ಸಂದೇಶಗಳನ್ನು ಬರೆದು ಅದನ್ನು ಇಂಗ್ಲಿಷ್ಗೆ ಭಾಷಾಂತರಿಸಿಕೊಂಡು ಎಮಿಲಿಗೆ ಕಳುಹಿಸುತ್ತಿದ್ದರಂತೆ. ಹಾಗೇ ಎಮಿಲಿ ಕಳುಹಿಸಿದ ಸಂದೇಶವನ್ನು ಮತ್ತೆ ಹಿಂದಿಗೆ ಭಾಷಾಂತರಿಸಿಕೊಂಡು ಅರ್ಥ ಮಾಡಿಕೊಳ್ಳುತ್ತಿದ್ದರಂತೆ.
ಇದೇ ಸ್ನೇಹ ಪ್ರೀತಿಯಾಗಿ ಮುಂದುವರಿದಿದೆ. ಇಬ್ಬರೂ ಒಂದಿಷ್ಟು ದಿನ ಫೇಸ್ಬುಕ್ ಸಂಭಾಷಣೆಯ ಮೂಲಕವೇ ಪ್ರೀತಿಯ ವಿನಿಮಯ ಮಾಡಿಕೊಂಡಿದ್ದಾರೆ. ಮದುವೆಯಾಗಲೂ ನಿರ್ಧರಿಸಿದರು. ಇಷ್ಟೆಲ್ಲಾ ಆದ ಬಳಿಕ ಕೆಲ ದಿನಗಳ ಕಾಲ ಇಬ್ಬರೂ ವಿಡಿಯೋ ಚಾಟ್ ಕೂಡ ನಡೆಸಿದ್ದರಂತೆ.
ಅಂತೂ ಕಳೆದವಾರ ಅಹಮದಾಬಾದ್ಗೆ ಬಂದ ಎಮಿಲಿ, ಹಿಂದು ಧರ್ಮದ ಸಂಪ್ರದಾಯದಂತೆ ಹಿತೇಶ್ನನ್ನು ಮದುವೆಯಾಗಿ, ಎಲ್ಲರ ವಿಶ್ವಾಸ ಗೆದ್ದು ಅಮೆರಿಕಕ್ಕೆ ಕರೆದೊಯ್ದಿದ್ದಾರೆ.
Advertisement