ನನ್ನ ಚಿತ್ರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಸಾಕು ಮಾಡಿ : ಕುತುಬುದ್ದೀನ್ ಅನ್ಸಾರಿ

ಕಣ್ಣೀರಿಡುತ್ತಾ ಜೀವ ಭಿಕ್ಷೆ ಬೇಡುತ್ತಿರುವ ಚಿತ್ರ 2002ರ ಗಲಭೆಯನ್ನು ಬಿಂಬಿಸುವ ಚಿತ್ರವಾಗಿದೆ. 14 ವರ್ಷಗಳ ಕಾಲ ಗುಜರಾತ್‌ ಗಲಭೆ ಸಂಬಂಧ ಕುತುಬುದ್ದೀನ್‌ ಅನ್ಸಾರಿ ಅವರ ಫೋಟೋ...
ಕುತುಬುದ್ದೀನ್‌ ಅನ್ಸಾರಿ
ಕುತುಬುದ್ದೀನ್‌ ಅನ್ಸಾರಿ

ಅಹಮದಾಬಾದ್: ನನ್ನ ಚಿತ್ರವನ್ನು ಬಳಸಿಕೊಳ್ಳೋದನ್ನು ಬಿಡಿ. ನನ್ನನ್ನು ರಾಜಕೀಯ ಅಸ್ತ್ರವಾಗಿಸುವ ಇಂಥ ನಡೆಗಳು ಬದುಕಿನ ನೆಮ್ಮದಿಯನ್ನೇ ಕದಡಿವೆ ಎಂದು ಗುಜರಾತ್ ಗಲಭೆ ಸಂತ್ರಸ್ತ  ಕುತುಬುದ್ದೀನ್ ಅನ್ಸಾರಿ ಹೇಳಿದ್ದಾರೆ.

ಕಣ್ಣೀರಿಡುತ್ತಾ ಜೀವ ಭಿಕ್ಷೆ ಬೇಡುತ್ತಿರುವ ಚಿತ್ರ 2002ರ ಗಲಭೆಯನ್ನು ಬಿಂಬಿಸುವ ಚಿತ್ರವಾಗಿದೆ. 14 ವರ್ಷಗಳ ಕಾಲ ಗುಜರಾತ್‌ ಗಲಭೆ ಸಂಬಂಧ ಖುತುಬುದ್ದೀನ್‌ ಅನ್ಸಾರಿ ಅವರ ಫೋಟೋ ಬಳಸಿಕೊಳ್ಳುತ್ತಿರುವುದು ಅವರಿಗೆ ಇರಿಸುಮುರುಸು ತಂದಿದೆ. ಚುನಾವಣಾ ಪ್ರಚಾರದ ವಸ್ತುವಾಗಿ ಕಾಂಗ್ರೆಸ್‌ ತನ್ನನ್ನು ಬಳಸಿಕೊಳ್ಳುತ್ತಿದೆ ಎಂದು ಅನ್ಸಾರಿ ಆರೋಪಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿರುವ ಅವರು,  ರಾಜಕೀಯ ಬೆಳೆ ಬೇಯಿಸಿಕೊಳ್ಳಲು ನನ್ನ ಫೋಟೊ ಬಳಸಿದಾಗಲೆಲ್ಲ ತುಂಬಾ ನೋವಾಗುತ್ತದೆ. ಫೋಟೋವನ್ನು ರಾಜಕೀಯ ಪಕ್ಷಗಳಿಗೆ ನಾನೇ ಉದ್ದೇಶಪೂರ್ವಕವಾಗಿ ಪ್ರೋತ್ಸಾಹ ನೀಡುತ್ತಿದ್ದೇನೆ, ಇದಕ್ಕಾಗಿ ದುಡ್ಡು ತೆಗೆದುಕೊಳ್ತಿದೇನೆ ಎಂಬ ಆರೋಪಗಳು ಕೇಳಿ ಬಂದಿವೆ.

ನನ್ನ ಮಕ್ಕಳು  ಯಾಕಪ್ಪಾ, ಎಲ್ಲ ಫೋಟೋಗಳಲ್ಲೂ ನೀನು ಅಳುತ್ತಾ, ಬೇಡುತ್ತಾ ಇದ್ದೀಯಾ ಎಂದು ಕೇಳುತ್ತಾರೆ. ಅವರ ಪ್ರಶ್ನೆಗಳಿಗೆ ನಾನು ಏನಂತಾ ಉತ್ತರಿಸಲಿ, ನನ್ನ ಫೋಟೋಗಳನ್ನು ಬಳಸುವುದನ್ನು ಸಾಕು ಮಾಡಿ ಎಂದು ನೊಂದು ನುಡಿದಿದ್ದಾರೆ.  ಕೊಲ್ಕೊತಾದಿಂದ ಗುಜರಾತ್ ಗೆ  ಬಂದು ಮತ್ತೆ  ಬದುಕು  ಕಟ್ಟಿಕೊಳ್ಳುತ್ತಿರುವ ತಮ್ಮನ್ನು ಸಾಮಾನ್ಯನಂತೆ ಬದುಕಲು ಬಿಡಿ ಎಂದು ಅನ್ಸಾರಿ ಬೇಡುತ್ತಿದ್ದಾರೆ.

ಘಟನೆ ನಡೆದು 14 ವರ್ಷಗಳಾಗಿವೆ. ನನಗೀಗ 43 ವರ್ಷ. ಈಗಲೂ ರಾಜಕೀಯ ಪಕ್ಷಗಳು, ಬಾಲಿವುಡ್‌ ಹಾಗೂ ಉಗ್ರ ಸಂಘಟನೆ ಚಿತ್ರದ ದುರ್ಬಳಕೆ ಮಾಡುತ್ತಿವೆ. ನಾನೊಬ್ಬ ಬಡ ಟೈಲರ್‌ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಸಾಕಲು ಕಷ್ಟ ಪಡುತ್ತಿದ್ದೇನೆ. ರಾಜಕೀಯ ಪಕ್ಷಗಳು ನನ್ನ ಚಿತ್ರ ಬಳಸಿ ಲಾಭ ಮಾಡಿಕೊಳ್ಳುತ್ತವೆ. ಈ ರೀತಿ ನನ್ನ ಚಿತ್ರ ಬಳಸುವುದರಿಂದ ನನ್ನ ಜೀವನಕ್ಕೆ ಕಷ್ಟ ವಾಗುತ್ತದೆ ಎಂಬ ಅರಿವು ಅವರಿಗಿಲ್ಲವೇ,?'ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಈ ಚಿತ್ರವನ್ನು ಬಳಸಿಕೊಂಡಿದೆ. ಚಿತ್ರದಲ್ಲಿ 'ಮೋದಿ ಅವರ ಗುಜರಾತ್ ಅಂದರೆ ಅಭಿವೃದ್ಧಿಯ ಪ್ರತೀಕವೇ ? ಅಸ್ಸಾಂ ಮತ್ತೊಂದು ಗುಜರಾತ್‌ ಆಗಬೇಕೇ ? ನಿರ್ಧಾರ ನಿಮ್ಮದು ಎಂದು ಬರೆಯಲಾಗಿದೆ. ಈ ಚಿತ್ರ ಬಳಸಿಕೊಳ್ಳಲು ಕಾಂಗ್ರೆಸ್‌ ಅನ್ಸಾರಿಯ ಅನುಮತಿ ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com