ಜಮ್ಮು ಕಾಶ್ಮೀರ: ನಾಗರಿಕರ ಮೇಲೆ ಯೋಧರು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವದಂತಿಗಳು ಹರಡುತ್ತಿದ್ದು, ಸಮಾಜದ ವಿರೋಧಿ ಅಂಶಗಳು ಶಾಂತಿಯನ್ನು ಕದಡಬಹುದು ಎಂಬ ಹಿನ್ನಲೆಯಲ್ಲಿ ಅಲ್ಲಿನ ಪೊಲೀಸರು ಮೊಬೈಲ್ ಅಂತರ್ಜಾಲ ಸೇವೆಯನ್ನು ಗುರುವಾರ ಸ್ಥಗಿತಗೊಳಿಸಿದ್ದಾರೆ.
ಅಂತರ್ಜಾಲ ಸೇವೆ ಪೂರೈಕೆದಾರರಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಂಗಳವಾರ ಯೋಧನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಯೋಧರ ವಿರುದ್ಧ ಸ್ಥಳಿಯರು ಪ್ರತಿಭಟನೆ ನಡೆಸಿದರು. ಈ ವೇಳೆ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗುಂಪನ್ನು ಚದುರಿಸಲು ಯೋಧರು ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿದ್ದು, ಇದರಿಂದ ಸಮಾಜದ ಶಾಂತಿ ಕದಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇಂದು ಬೆಳಗ್ಗಿನಿಂದಲೇ, ಕುಪ್ವಾರ, ಬರಮುಲ್ಲಾ, ಬಂಡಿಪುರ ಮತ್ತು ಗಂದೇರ್ ಬಲ್ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಂಡಿದೆ. ಇನ್ನು ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರ ನಿವಾಸಿಗಳು ಇಂಟರ್ ನೆಟ್ ಸೌಲಭ್ಯ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.