
ಮ್ಹೋವ್ (ಮಧ್ಯಪ್ರದೇಶ): ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ ಅವರ ಹುಟ್ಟೂರಾದ ಮ್ಹೋವ್ ಕಂಟೋನ್ ಮೆಂಟ್ ಪಟ್ಟಣದ ಕಾಲಿಪಲ್ತನ್ ಪ್ರದೇಶದಲ್ಲಿರುವ ಅವರ ಪ್ರತಿಮೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಗೌರವ ನಮನ ಸಲ್ಲಿಸಿದರು.
ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮ್ಹೋವ್ ಕಂಟೋನ್ ಮೆಂಟ್ ಪಟ್ಟಣದಲ್ಲಿ 1891 ಏಪ್ರಿಲ್ 14ರಂದು ಜನಿಸಿದ್ದರು. ಅವರ ನೆನಪಿಗಾಗಿ ರಾಜ್ಯ ಸರ್ಕಾರ ಅವರ ಹುಟ್ಟೂರಲ್ಲಿ ಭವ್ಯ ಸ್ಮಾರಕದ ನಿರ್ಮಾಣ ಮಾಡಿತ್ತು. ಅಂಬೇಡ್ಕರ್ ಅವರ ಹುಟ್ಟೂರಿಗೆ ಭೇಟಿ ನೀಡಿದ ಮೊದಲ ಪ್ರಧಾನ ಮಂತ್ರಿ ಮೋದಿ ಎಂದು ಅಂಬೇಡ್ಕರ್ ಸಾಮಾಜಿಕ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್.ಎಸ್. ಕುರೀಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಧಾನಿಯವರ ಜೊತೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಇತರ ಗಣ್ಯರು ಸೇರಿದ್ದರು. ಅಂಬೇಡ್ಕರ್ ಅವರ ಭವ್ಯ ಸ್ಮಾರಕಕ್ಕೆ ಹೂ ಹಾರ ಸಮರ್ಪಿಸಿದ ಪ್ರಧಾನಿ ಅಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಕಳೆದರು. ನಂತರ ಅವರು ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದರು ಹಾಗೂ 11 ದಿನಗಳ ಗ್ರಾಮ ಉದಯ್ ಸೆ ಭಾರತ್ ಉದಯ್ ಅಭಿಯಾನ(ಗ್ರಾಮ ಸ್ವ ಆಡಳಿತ ಅಭಿಯಾನ)ಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಇಂದೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಜ್ಯ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಸ್ವಾಗತಿಸಿದರು. ಮೋದಿಯವರು ಇಂದೋರ್ ವಿಮಾನ ನಿಲ್ದಾಣದಿಂದ ಮ್ಹೊವ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಿದರು.
Advertisement