
ಅಹಮದಾಬಾದ್: ಗಂಡನಿಗೆ ಹೇಳಿದ ಸುಳ್ಳನ್ನು ನಿಜ ಮಾಡಲು ಹೋದ ಪತ್ನಿ ಪೊಲೀಸರ ಅತಿಥಿಯಾಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಅಹಮದಾಬಾದ್ ನ ಶಹಾಪುರ ನಿವಾಸಿ ಪ್ರಿಯಾಂಕಾ ಪಾಟೀಲ್ ಜೈಲು ಸೇರಿರುವ ಮಹಿಳೆ. ಮದುವೆಯಾಗುವ ಮುನ್ನ ತನ್ನ ಪತಿಯನ್ನು ಮೆಚ್ಚಿಸುವ ಸಲುವಾಗಿ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಎಂದು ಹೇಳಿಕೊಂಡಿದ್ದಳು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸಂಜಯ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪ್ರೀತಿಸುವ ವೇಳೆ ತಾನು ಆರ್ ಪಿಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಳು.
ವಿವಾಹವಾದ ನಂತರ ತನ್ನ ಗಂಡ ಹಾಗೂ ಅತ್ತೆ ಮಾವನನ್ನು ನಂಬಿಸಲು ಪ್ರತಿ ದಿನ ಆಕೆ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಹೋಗುತ್ತಿದ್ದಳು. ಬೆಳಗ್ಗೆ ಸಂಜಯ್ ಪಟೇಲ್ ಆಕೆಯನ್ನು ರೈಲ್ವೆ ನಿಲ್ದಾಣದ ಬಳಿ ಬಿಡುತ್ತಿದ್ದ. ನಂತರ ಸಂಜೆ ಆಕೆ ತಾನೇ ವಾಪಸ್ ಮನೆಗೆ ಬರುತ್ತಿದ್ದಳು.
ಕೆಲ ದಿನಗಳ ಹಿಂದೆ ಈಕೆ ನಕಲಿ ಪೊಲೀಸ್ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ನಂತರ ಪ್ರಿಯಾಂಕಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರ ಬಳಿ ಸತ್ಯ ಹೇಳಿದ್ದಾಳೆ.
ರೈಲ್ವೆ ನಿಲ್ದಾಣದ ಬಳಿಯಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಆಕೆಯಿಂದ ಯಾವುದೇ ಅಪರಾಧಗಳು ಆಗಿಲ್ಲವೆಂದು, ಕೇವಲ ಮನೆಯವರನ್ನು ಮೆಚ್ಚಿಸಲು ನಕಲಿ ಪೊಲೀಸ್ ಆಗಿದ್ದಳೆಂದು, ಯಾವ ದುರುದ್ದೇಶವೂ ಇರಲಿಲ್ಲ ಎಂದು ತಿಳಿದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿದಿನ ಕೆಲಸಕ್ಕೆ ಹೋಗುವಾಗ ಪೊಲೀಸ್ ಸಮವಸ್ತ್ರ ಧರಿಸುತ್ತಿದ್ದ ಆಕೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Advertisement