ಆಗ್ರಾ: ಐತಿಹಾಸಿಕ ತಾಜ್ ಮಹಲ್ ಭೇಟಿಯೊಂದಿಗೆ ಇಂಗ್ಲೆಂಡಿನ ರಾಜಕುಮಾರ ವಿಲಿಯಮ್ ಹಾಗೂ ಕೇಟ್ ಮಿಡ್ಲ್ ಟನ್ ದಂಪತಿಯ ಒಂದು ವಾರಗಳ ಭಾರತ ಪ್ರವಾಸಕ್ಕೆ ಶನಿವಾರ ತೆರೆ ಬಿದ್ದಿದೆ.
ಬ್ರಿಟನ್ ನ ರಾಜದಂಪತಿ ಆಗ್ರಾದ ಪ್ರೀತಿಯ ಸಂಕೇತದ ಸ್ಮಾರಕಕ್ಕೆ ಇಂದು ಅಪರಾಹ್ನ 3.45ರ ಸುಮಾರಿಗೆ ಭೇಟಿ ನೀಡಿದರು. ತಾಜ್ ವೀಕ್ಷಣೆ ಬಳಿಕ ಇಲ್ಲಿಯೇ ಭೋಜನ ಸವಿದ ರಾಯಲ್ ದಂಪತಿಗಳು, ಬಳಿಕ ದೆಹಲಿಗೆ ತೆರಳಿದ್ದಾರೆ. ಬ್ರಿಟನ್ ನ ರಾಜದಂಪತಿಯ ಭೇಟಿ ವೇಳೆ ತಾಜ್ ಮಹಲ್ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಡಲಾಗಿತ್ತು.
ರಾಜದಂಪತಿ ಭೇಟಿ ಸಂದರ್ಭದಲ್ಲಿ ಹೆಚ್ಚಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರೊಟೊಕಾಲ್ ಅಡಿ ವಿನಾಯ್ತಿಯಿರುವುದರಿಂದ ರಾಜದಂಪತಿ ಹಾಗೂ ಅವರ ಆಪ್ತರಿಗೆ ಪ್ರವೇಶ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ ಮತ್ತು ಪ್ರವೇಶದ್ವಾರದಲ್ಲಿ ಯಾವುದೇ ತಪಾಸಣೆಯೂ ಇರುವುದಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 10ರಿಂದ ಒಂದು ವಾರಗಳ ಕಾಲ ಭಾರತ ಪ್ರವಾಸದಲ್ಲಿದ್ದ ಬ್ರಿಟನ್ ರಾಜದಂಪತಿ ಮುಂಬೈ, ದೆಹಲಿ, ಅಸ್ಸಾಂನ ಕಜ್ಹಿರಂಗ ರಾಷ್ಟ್ರೀಯ ಉದ್ಯಾನವನ ಭೇಟಿ ನಂತರ ಭೂತಾನ್ ಗೆ ತೆರಳಿದ್ದರು. ವಾಪಾಸು ದೆಹಲಿಗೆ ಆಗಮಿಸಿದ್ದು, ಇಂದು ತಮ್ಮ ದೇಶಕ್ಕೆ ಹಿಂತಿರುಗಲಿದ್ದಾರೆ.
ಸ್ವಾತಂತ್ರ್ಯೋತ್ತರ ನಂತರ ರಾಣಿ ಎಲಿಜಬೆತ್ 2, ಪ್ರಿನ್ಸ್ ಫಿಲಿಪ್ 1961ರಲ್ಲಿ ತಾಜ್ ಮಹಲ್ ಗೆ ಭೇಟಿ ಕೊಟ್ಟಿದ್ದರು. ಪ್ರಿನ್ಸ್ ವಿಲಿಯಮ್ಸ್ ಪೋಷಕರಾದ ಪ್ರಿನ್ಸ್ ಚಾರ್ಲ್ಸ್ 1982ರಲ್ಲಿ ಮತ್ತು ಡಯಾನಾ 1992ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ್ದರು. ಇವರಲ್ಲಿ ರಾಣಿ ಡಯಾನಾ ಭೇಟಿ ಸ್ಮರಣೀಯವಾದದ್ದು. ತಾಜ್ ಮಹಲ್ ಮುಂದೆ ಮಾರ್ಬಲ್ ಬೆಂಚ್ ಮೇಲೆ ಕುಳಿತುಕೊಂಡು ರಾಣಿ ಡಯಾನಾ ಛಾಯಾಚಿತ್ರ ತೆಗೆಸಿಕೊಂಡದ್ದು ಅಲ್ಲಿನ ನೆನಪುಗಳಲ್ಲೊಂದು. ಈಗಲೂ ಅದನ್ನು ಡಯಾನಾ ಸೀಟು ಅಂತ ಕರೆಯುತ್ತಾರೆ.