ಮೋದಿ ಪ್ರಧಾನಿಯಾದ ನಂತರ ಬಿಜೆಪಿ ಆದಾಯ ಶೇ.44ರಷ್ಟು ಹೆಚ್ಚಳ

ಸದ್ಯ ರಾಷ್ಟ್ರೀಯ ಪಕ್ಷಗಳ ಪೈಕಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, ನರೇಂದ್ರ ಮೋದಿ ಅವರು...
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ
ನವದೆಹಲಿ: ಸದ್ಯ ರಾಷ್ಟ್ರೀಯ ಪಕ್ಷಗಳ ಪೈಕಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪಕ್ಷದ ಆದಾಯ ಶೇ.44ರಷ್ಟು ಹೆಚ್ಚಳವಾಗಿದೆ.
ಭಾರತೀಯ ಜನತಾ ಪಕ್ಷಕ್ಕೆ 2014 -15 ರಲ್ಲಿ ಬರೊಬ್ಬರಿ 970.43 ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಆದರೆ ಮತ್ತೊಂದು ಪ್ರಮುಖ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಮಾತ್ರ 2014-15 ನೇ ಸಾಲಿನ ಆಡಿಟ್‌ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘ(ಎಡಿಆರ್‌ ) ತಿಳಿಸಿದೆ.
ಚುನಾವಣಾ ಆಯೋಗದ 2014 ನವೆಂಬರ್‌ 19ರ ಪತ್ರದ ಆದೇಶದಂತೆ ಎಲ್ಲಾ ರಾಜಕೀಯ ಪಕ್ಷಗಳು ಆಡಿಟ್‌ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ವಿವರ ಸಲ್ಲಿಸಲು 2015 ರ ನೆವೆಂಬರ್‌ 30 ಕೊನೆಯ ದಿನವಾಗಿತ್ತು.
ಬಿಜೆಪಿ , ಸಿಪಿಎಂ , ಸಿಪಿಐ ಮತ್ತು ಬಿಎಸ್‌ಪಿ ಪಕ್ಷಗಳು ಮಾತ್ರ ಸಮಯಕ್ಕೆ ಸರಿಯಾಗಿ ಆಡಿಟ್‌ ವಿವರ ಸಲ್ಲಿಸಿದ್ದು, ಉಳಿದ ಎಲ್ಲಾ ಪಕ್ಷಗಳು ತಡಮಾಡಿವೆ. ಬಿಜೆಪಿ , ಕಾಂಗ್ರೆಸ್‌ ,ಸಿಪಿಎಂ ,ಸಿಪಿಐ ,ಬಿಎಸ್‌ಪಿ ಮತ್ತು ಎನ್‌ಸಿಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ 6 ಪಕ್ಷಗಳಾಗಿವೆ.
ವರದಿಯಲ್ಲಿ ತಿಳಿಸಿದಂತೆ ರಾಷ್ಟ್ರೀಯ ಪಕ್ಷಗಳ ಆದಾಯ 2014-15 ರ ಸಾಲಿನಲ್ಲಿ ಶೇ. 39ರಷ್ಟು ಏರಿಕೆಯಾಗಿದ್ದು , 2013-14 ರಲ್ಲಿ 920.44 ಕೋಟಿಯಷ್ಟಿದ್ದ ಆದಾಯ 1,275.78 ಕೋಟಿ ರುಪಾಯಿಗಳಿಗೆ ಏರಿದೆ.
ರಾಜಕೀಯ ಪಕ್ಷಗಳಿಗೆ ಆದಾಯ ಉದ್ಯಮಿಗಳ ದೇಣಿಗೆ, ಕೂಪನ್‌ಗಳ ಮಾರಾಟ ಮತ್ತು ಕೊಡುಗೈ ದಾನಿಗಳಿಂದ ಬರುತ್ತದೆ.
ಅಚ್ಚರಿಯೆಂದರೆ ರಾಜಕೀಯ ಪಕ್ಷಗಳಿಗೆ ಬಂದಿರುವ ದೇಣಿಗೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು (54 ಶೇಕಡಾ) ಆದಾಯ ಅಪರಿಚಿತ ಮೂಲಗಳಿಂದ ಹರಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com