ಹುಡುಗಿಯರು ಹೀಗೆ ಸಾಧನೆ ಮುಂದುವರಿಸಿದರೆ ಪುರುಷರು ಮೀಸಲಾತಿಗೆ ಪ್ರತಿಭಟನೆ ಮಾಡಬೇಕಾಗಿಬರಬಹುದು: ಪ್ರಧಾನಿ

ಜಿಮ್ನಾಸ್ಟಿಕ್ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪಂದ್ಯಕ್ಕೆ ಆಯ್ಕೆಯಾದ ದೀಪಾ ಕರ್ಮಕರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ...
ಜಮ್ಮುವಿನ ಕತ್ರದಲ್ಲಿ ಶ್ರೀ ಮಾತ ವೈಷ್ಣೋದೇವಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ  ಮೆಹಬೂಬ ಮುಫ್ತಿ
ಜಮ್ಮುವಿನ ಕತ್ರದಲ್ಲಿ ಶ್ರೀ ಮಾತ ವೈಷ್ಣೋದೇವಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ
Updated on

ಕತ್ರ(ಜಮ್ಮು-ಕಾಶ್ಮೀರ): ಜಿಮ್ನಾಸ್ಟಿಕ್ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪಂದ್ಯಕ್ಕೆ ಆಯ್ಕೆಯಾದ ದೀಪಾ ಕರ್ಮಕರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ,''ಹುಡುಗಿಯರು ಇದೇ ರೀತಿ ಸಾಧನೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಪುರುಷರು ಮೀಸಲಾತಿಗಾಗಿ ಪ್ರತಿಭಟನೆ ನಡೆಸುವ ಸಂದರ್ಭ ಬರಬಹುದು'' ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಭಾರತದ ಹೆಣ್ಣು ಮಗಳೊಬ್ಬಳು ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಇಂಥವರು ಇತರರಿಗೆ ಮಾದರಿಯಾಗುತ್ತಾರೆ ಮತ್ತು ನಮಗೆ ಬಲ ತಂದುಕೊಡುತ್ತಾರೆ'' ಎಂದು ಜಮ್ಮುವಿನ ಕತ್ರದಲ್ಲಿ ಶ್ರೀ ಮಾತ ವೈಷ್ಣೋದೇವಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವನ್ನುದ್ದೇಶಿಸಿ ನುಡಿದರು.

ಹುಡುಗಿಯರು ಪದಕ ಗೆಲ್ಲುವುದು ನೋಡಿ ಮಾತಾ ವೈಷ್ಣೋದೇವಿಗೆ ಖುಷಿಯಾಗುತ್ತದೆ. ಹುಡುಗಿಯರು ಇದೇ ರೀತಿ ಸಾಧನೆ ಮುಂದುವರಿಸಿದರೆ ಪುರುಷರು ಮೀಸಲಾತಿಗಾಗಿ ಬೇಡಿಕೆಯೊಡ್ಡುವ ದಿನಗಳು ಬರಬಹುದು ಎಂದ ಪ್ರಧಾನಿ, ತಮ್ಮ ಹೆಣ್ಣುಮಕ್ಕಳು ಓದಲು ಪ್ರೋತ್ಸಾಹಿಸುವ ಎಲ್ಲಾ ತಾಯಂದಿರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಸಿಗುವ ಉತ್ತಮ ಜ್ಞಾನವನ್ನು ಬಳಸಿಕೊಂಡು ದೇಶ ಮತ್ತು ಮಾನವ ಸೇವೆಯಲ್ಲಿ ನಿರತರಾಗುವಂತೆ ನೆರೆದಿದ್ದ ವಿದ್ಯಾರ್ಥಿವೃಂದಕ್ಕೆ ಕರೆ ನೀಡಿದರು.

ಮಾಜಿ ರಾಷ್ಟ್ರಪತಿ ದಿ| ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಪರ್ವತ ಮನುಷ್ಯ ಮಂಜಿ ಅವರನ್ನು ಉದಾಹರಣೆಯಾಗಿ ವಿವರಿಸಿದ ಮೋದಿ, ಯಶಸ್ಸು ಯಾವಾಗಲು ಕೇವಲ ನಾವು ಹೊಂದಿರುವ ಸಂಪನ್ಮೂಲದಿಂದ ಮಾತ್ರ ಬರುವುದಿಲ್ಲ, ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಹೊರಗಿನ ವಿದ್ಯಾರ್ಥಿಗಳ ಕುಂದು ಕೊರತೆ, ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದರು. ಶ್ರೀನಗರದ ಎನ್ ಐಟಿ ವಿಶ್ವವಿದ್ಯಾಲಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಪಂದ್ಯದಲ್ಲಿ ಸೋತ ಸಂದರ್ಭದಲ್ಲಿ ನಡೆದ ವಿವಾದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ಹೇಳಿಕೆ ಮಹತ್ವ ಪಡೆದಿದೆ. ಆ ಸಮಯದಲ್ಲಿ ಸುಮಾರು ಒಂದೂವರೆ ಸಾವಿರ ಕಾಶ್ಮೀರೇತರ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ಬಿಟ್ಟು ಹೋಗುವಂತೆ ಒತ್ತಾಯಪಡಿಸಲಾಗಿತ್ತು.

'' ದೇಶದ ಯಾವುದೇ ಮೂಲೆಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ. ಅತಿಥಿಗಳಾಗಿ ಬರುವ ವಿದ್ಯಾರ್ಥಿಗಳು ಮತ್ತೆ ಹೋಗುವಾಗ ನಮ್ಮ ಅಭಿಮಾನ ರಾಯಭಾರಿಗಳಾಗಿ ಹೋಗಬೇಕು.ಕಾಶ್ಮೀರದ ವಿದ್ಯಾರ್ಥಿಗಳು ಬೇರೆಡೆಗೆ ಹೋದಾಗ ಅಲ್ಲಿನ ಜನ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ನಾವು ಬೇರೆಯವರಿಗೆ ಉತ್ತಮ ನಡೆ-ನುಡಿ ತೋರಿಸಬೇಕು ಎಂದು ಮೆಹಬೂಬ ಮುಫ್ತಿ ಆಶಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com