ಶಿಶು ಗೃಹದಲ್ಲಿನ ಮಕ್ಕಳಿಗೆ ಕಾದ ಚಮಚದಿಂದ ಬರೆ ಎಳೆದು ಶಿಕ್ಷೆ

ಐದು ವರ್ಷಗಿಂತ ಕೆಳಗಿನ ವಯಸ್ಸಿನ ಪುಟ್ಟ ಮಕ್ಕಳು ಈ ಅನಾಥಾಲಯದಲ್ಲಿದ್ದು, ಬಡಿಸಿದ ಆಹಾರವನ್ನು ತಿನ್ನದೇ ಇದ್ದರೆ ಚಮಚವನ್ನು ಬಿಸಿ ಮಾಡಿ..
ಶಿಶುಗೃಹದ ಪುಟಾಣಿಗಳು  (ಕೃಪೆ: ಎಕ್ಸ್ ಪ್ರೆಸ್ ಫೋಟೋ)
ಶಿಶುಗೃಹದ ಪುಟಾಣಿಗಳು (ಕೃಪೆ: ಎಕ್ಸ್ ಪ್ರೆಸ್ ಫೋಟೋ)
Updated on
ಕರೀಂನಗರ್ : ತೆಲಂಗಾಣ ರಾಜ್ಯದ ಕರೀಂನಗರ್ ಜಿಲ್ಲೆಯಲ್ಲಿ ಸರ್ಕಾರದ ಅಧೀನದಲ್ಲಿರುವ ಅನಾಥಮಕ್ಕಳ ಶಿಶುಗೃಹದಲ್ಲಿ ಪುಟ್ಟ ಮಕ್ಕಳು ಊಟ ಮಾಡಲು ನಿರಾಕರಿಸಿದರೆ ಅಲ್ಲಿನ ಆಯಾಗಳು ಕಾದ ಚಮಚದಿಂದ ಮಕ್ಕಳ ಮೇಲೆ ಬರೆ ಎಳೆಯುತ್ತಾರೆ!
ಐದು ವರ್ಷಗಿಂತ ಕೆಳಗಿನ ವಯಸ್ಸಿನ ಪುಟ್ಟ ಮಕ್ಕಳು ಈ ಅನಾಥಾಲಯದಲ್ಲಿದ್ದು, ಬಡಿಸಿದ ಆಹಾರವನ್ನು ತಿನ್ನದೇ ಇದ್ದರೆ ಚಮಚವನ್ನು ಬಿಸಿ ಮಾಡಿ ಮಕ್ಕಳ ದೇಹದ ಮೇಲೆ ಬರೆ     ಎಳೆಯಲಾಗುತ್ತದೆ. 
ಆಯಾಗಳ ಈ ದೌರ್ಜನ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಸ್ತುತ ಪ್ರಕರಣ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ.
ಎರಡು ವರ್ಷದ ಬಾಲಕ ಸೇರಿದಂತೆ ಏಳು ಪುಟ್ಟ ಮಕ್ಕಳ ಮೇಲೆ ಶುಕ್ರವಾರ ಆಯಾಗಳು ಬರೆ ಎಳೆದಿದ್ದರು. ಮಕ್ಕಳಿಗೆ ಊಟ ಬಡಿಸಿ, ಅದನ್ನು ತಿನ್ನಲು ನಿರಾಕರಿಸಿದಾಗ ಶಿಶುಗೃಹದ  ಬುಚ್ಚಮ್ಮ ಎಂಬ ಆಯಾ ಚಮಚವನ್ನು ಬಿಸಿ ಮಾಡಿ ಇನ್ನೊಬ್ಬ ಆಯಾ ಪದ್ಮಾ ಎಂಬಾಕೆಗೆ ನೀಡುತ್ತಾಳೆ. ಪದ್ಮಾ ಆ ಕಾದ ಚಮಚವನ್ನು ಮಕ್ಕಳ ಮೊಣ ಕೈಗಿಟ್ಟು ಸುಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರೀಂನಗರದ ಮಂಕಮ್ಮತೋಟದಲ್ಲಿರುವ ಶಿಶುಗೃಹವನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿದೆ. 5 ವರ್ಷದ ಕೆಳಗಿನ 8 ಮಕ್ಕಳು ಇಲ್ಲಿದ್ದಾರೆ. 
ಶುಕ್ರವಾರ ಈ ಘಟನೆ ನಡೆದಿದ್ದರೂ, ಶನಿವಾರ ರಾತ್ರಿಯವರೆಗೆ ಇಲ್ಲಿನ ಯಾವುದೇ ನೌಕರರು ಹಿರಿಯ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿಲ್ಲ. ಇದರ ಬದಲು ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಅಂಗನವಾಡಿಗೆ ಕಳಿಸಿದ್ದರು.
ಶಿಶುಗೃಹದ ಮ್ಯಾನೇಜರ್ ಇ ದೇವರಾಜ್ ಮತ್ತು ವಾರ್ಡನ್ ಕೆ.ಶ್ರೀಲತಾ (ಸಾಮಾಜಿಕ ಕಾರ್ಯಕರ್ತೆ) ಅವರಿಗೆ ಈ ವಿಷಯ ಗೊತ್ತಾದ ಕೂಡಲೇ ಅವರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯ ನಿರ್ದೇಶಕ ಎಸ್ ಮೋಹನ್ ರೆಡ್ಡಿ ಅವರ ಗಮನಕ್ಕೆ ತಂದಿದ್ದಾರೆ. 
ಸೋಮವಾರ ಸಿಸಿಟಿವಿ ದೃಶ್ಯವನ್ನು  ವೀಕ್ಷಿಸಿದ ಮೋಹನ್ ರೆಡ್ಡಿ ಅವರು ಪ್ರಸ್ತುತ ಪ್ರಕರಣದ ಬಗ್ಗೆ ಕರೀಂನಗರ್ ಜಿಲ್ಲಾಧಿಕಾರಿ ನೀತು ಪ್ರಸಾದ್ ಅವರಿಗೆ ಮಂಗಳವಾರ ರಾತ್ರಿ ದೂರು ನೀಡಿದ್ದಾರೆ. 
ಬುಧವಾರ ಶಿಶುಗೃಹಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿನ ಮಕ್ಕಳು ಮತ್ತು ಕೆಲಸದವರನ್ನು ತನಿಖೆಗೊಳಪಡಿಸಿದ್ದಾರೆ. ಎರಡು ದಿನಗಳ ಹಿಂದೆಯೇ ವಿಷಯ ಗೊತ್ತಾಗಿದ್ದರೂ ಶಿಶು ಗೃಹಕ್ಕೆ ಭೇಟಿ ನೀಡದೇ ಇರುವ ಮೋಹನ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಏತನ್ಮಧ್ಯೆ, ಈ ಇಬ್ಬರು ಆಯಾಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದು, ಸದ್ಯ ತಲೆ ಮರೆಸಿಕೊಂಡಿರುವ ಆಯಾಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಐ ಹರಿ ಪ್ರಸಾದ್ ಹೇಳಿದ್ದಾರೆ. ಈ ಇಬ್ಬರು ಆಯಾಗಳನ್ನು ಕೆಲಸದಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com