ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪರಿಸರ ವಿಜ್ಞಾನಿ ಆರ್ ಕೆ ಪಚೌರಿ ಅವರು ಇಂಧನ ಮತ್ತು ಸಂಪನ್ಮೂಲ ಸಂಸ್ಥೆ(ಟೆರಿ)ಯ ಆಡಳಿತ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ.
ಟೆರಿಯ ಸದಸ್ಯನಾಗಿ ನನ್ನ ಅವಧಿ 2016ರ ಮಾರ್ಚ್ 31ಕ್ಕೆ ಕೊನೆಗೊಂಡಿದೆ. ಸಂಸ್ಥೆಯಿಂದ ಹೊರಬಂದ್ದು, ಇತರ ಆಸಕ್ತಿಗಳಲ್ಲಿ ಕ್ರಿಯಾಶೀಲನಾಗುತ್ತೇನೆ ಎಂದು ಪಚೌರಿ ಹೇಳಿದ್ದಾರೆ.
ಪಚೌರಿ ಅವರೊಂದಿಗೆ ಟೆರಿ ಮಾಡಿಕೊಂಡಿರುವ ಒಪ್ಪಂದ 2017ರವರೆಗೆ ಚಾಲ್ತಿಯಲ್ಲಿದ್ದರೂ ಸಂಸ್ಥೆಯಿಂದ ಅವರನ್ನು ದೂರ ಇಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವರದಿ ಮಾದ್ಯಮವೊಂದರಲ್ಲಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಪಚೌರಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಚೌರಿ ವಿರುದ್ಧ ಈವರೆಗೆ ಮೂವರು ಮಹಿಳೆಯರು ದೂರು ದಾಖಲಿಸಿದ್ದಾರೆ. ನಿರೀಕ್ಷಣಾ ಜಾಮೀನಿನಲ್ಲಿರುವ ಆರ್.ಕೆ.ಪಚೌರಿ, ಲೈಂಗಿಕ ಕಿರುಕುಳ ಕೇಸಿಗೆ ಸಂಬಂಧಪಟ್ಟಂತೆ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದರು.