ಪೂರಮ್ ಉತ್ಸವದಲ್ಲಿ ಮನರಂಜನೆಗಾಗಿ ಕುರುಡು ಮತ್ತು ಅನಾರೋಗ್ಯ ಪೀಡಿತ ಆನೆಗಳ ಬಳಕೆ

ತ್ರಿಶೂರ್ ನ ಪೂರಂ ಉತ್ಸವದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿರುವ ಬೆನ್ನಲ್ಲೇ, ಅಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಪೂರಮ್ ಉತ್ಸವದಲ್ಲಿ ಮನರಂಜನೆಗಾಗಿ ಕುರುಡು, ಗಾಯಗೊಂಡ ಮತ್ತು ಅನಾರೋಗ್ಯ ಪೀಡಿತ ಆನೆಗಳ ಬಳಕೆ
ಪೂರಮ್ ಉತ್ಸವದಲ್ಲಿ ಮನರಂಜನೆಗಾಗಿ ಕುರುಡು, ಗಾಯಗೊಂಡ ಮತ್ತು ಅನಾರೋಗ್ಯ ಪೀಡಿತ ಆನೆಗಳ ಬಳಕೆ

ತ್ರಿಶೂರ್: ತ್ರಿಶೂರ್ ನ ಪೂರಂ ಉತ್ಸವದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿರುವ ಬೆನ್ನಲ್ಲೇ, ಅಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂ ಬಿಐ) ತ್ರಿಶೂರ್ ನ ಪೂರಂ ಉತ್ಸವದ ಬಗ್ಗೆ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದು, ತ್ರಿಶೂರ್ ಪೂರಂ ಉತ್ಸವದಲ್ಲಿ ಕೋರ್ಟ್ ಆದೇಶ ಹಾಗೂ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದೆ. ಉತ್ಸವದಲ್ಲಿ ಮನರಂಜನೆಗಾಗಿ ಕುರುಡು, ಗಾಯಗೊಂಡ ಮತ್ತು ಅನಾರೋಗ್ಯ ಪೀಡಿತ ಆನೆಗಳ ಬಳಕೆ ಮಾಡಿಕೊಂಡಿರುವುದು ಎಡಬ್ಲ್ಯೂಬಿಐ ನ ತನಿಖಾ ತಂಡದ ಗಮನಕ್ಕೆ ಬಂದಿದೆ.  ಆನೆಗಳಿಗೆ ಗಾಯಗಳುಂಟಾಗಿದ್ದರೂ ಅದನ್ನು ಕಪ್ಪು ವಸ್ತುವಿನಿಂದ ಮುಚ್ಚಿ ಉತ್ಸವಕ್ಕೆ ಬಳಸಿಕೊಳ್ಳಲಾಗಿದೆ ಎಂದು ತಪಾಸಣಾ ವರದಿಯಲ್ಲಿ ಆರೋಪಿಸಲಾಗಿದೆ.
 ಇನ್ನು ಉತ್ಸವದಲ್ಲಿ ಆನೆಗಳನ್ನು ನಿಯಂತ್ರಿಸಲು ಅಂಕುಶ ಸೇರಿದಂತೆ ನಿಷೇಧಿತ ಸಾಧನಗಳನ್ನು ಬಳಸಲಾಗಿತ್ತು ಎಂದು ತಪಾಸಣಾ ವರದಿಯಲ್ಲಿ ಆರೋಪಿಸಲಾಗಿದೆ. ಇಷ್ಟೇ ಅಲ್ಲದೇ ಆನೆಗಳ ನಾಲ್ಕೂ ಕಾಲುಗಳನ್ನು ಸರಪಳಿಯಿಂದ ಕಟ್ಟಿ, ಸುಡುಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಿಸಲಾಗಿತು ಎಂಬ ಆರೋಪವೂ ಕೇಳಿಬಂದಿದೆ.
ಯಾವುದೇ ಉತ್ಸವಗಳಲ್ಲಿ ಆನೆಗಳನ್ನು ಬಳಸಿಕೊಳ್ಳಬೇಕಾದರೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಮಾಣ ಪತ್ರ ಅಗತ್ಯವಿದೆ. ಆದರೆ ಉತ್ಸವದಲ್ಲಿ ಭಾಗವಹಿಸಿದ್ದ 67 ಆನೆಗಳ ಪೈಕಿ 31 ಆನೆಗಳ ಭಾಗವಹಿಸುವಿಕೆ ಅಕ್ರಮವಾಗಿದ್ದು, ಇವುಗಳ ಮಾಲಿಕರ ಬಳಿ ಸರಿಯಾದ ಪ್ರಮಾಣ ಪತ್ರ ಇರಲಿಲ್ಲ ಎಂಬ ಅಂಶವೂ ತನಿಖಾ ತಂಡ ನೀಡಿರುವ ವರದಿಯಿಂದ ಬಹಿರಂಗವಾಗಿದೆ. ಇವೆಲ್ಲದರ ಜೊತೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಆನೆಗಳ ಕ್ಷಮತೆಗೆ ತಪಾಸಣಾ ಶಿಬಿರಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಲಾಯಿತು ಎಂಬ ಆರೋಪವು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ  ಪೂರಂ ಉತ್ಸವದಲ್ಲಿ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶಗಳು ಉಲ್ಲಂಘನೆಯಾಗಿವೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸುಪ್ರೀಂ ಕೋರ್ಟ್ ಗೆ ವರದಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com