ನನ್ನ ಆತ್ಮಕತೆಯ ಸಿನಿಮಾ ನಿರ್ಮಿಸಿ ಬಾಲಿವುಡ್ ನನಗೇನೂ ಉಪಕಾರ ಮಾಡಿಲ್ಲ

ತನ್ನ ಆತ್ಮಕತೆಯನ್ನಾಧರಿಸಿ ಸಿನಿಮಾ ನಿರ್ಮಿಸಿ ಬಾಲಿವುಡ್ ನನಗೇನೂ ಉಪಕಾರ ಮಾಡಿಲ್ಲ ಎಂದು ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಹೇಳಿದ್ದಾರೆ...
ಮಿಲ್ಕಾ ಸಿಂಗ್
ಮಿಲ್ಕಾ ಸಿಂಗ್
ನವದೆಹಲಿ: ತನ್ನ ಆತ್ಮಕತೆಯನ್ನಾಧರಿಸಿ ಸಿನಿಮಾ ನಿರ್ಮಿಸಿ ಬಾಲಿವುಡ್ ನನಗೇನೂ ಉಪಕಾರ ಮಾಡಿಲ್ಲ ಎಂದು ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಹೇಳಿದ್ದಾರೆ.
ರಿಯೋ ಒಲಿಂಪಿಕ್ಸ್ ಗೇಮ್ಸ್‌ಗೆ ಸಲ್ಮಾನ್ ಖಾನ್‌ನ್ನು ರಾಯಭಾರಿಯನ್ನಾಗಿ ಮಾಡಿರುವ ವಿಷಯದಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು. ಕುಸ್ತಿಪಟು ಯೋಗೇಶ್ವರ್  ದತ್, ಮಿಲ್ಕಾ ಸಿಂಗ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಸಲ್ಮಾನ್ ಖಾನ್‌ರನ್ನು ರಾಯಭಾರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಹೀಗಿರುವಾಗ ಸಲ್ಮಾನ್ ಖಾನ್ ಅಪ್ಪ ಸಲೀಂ ಖಾನ್ , ಮಿಲ್ಕಾಜೀ, ಇದು ಬಾಲಿವುಡ್ ಅಲ್ಲ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ಆಗಿದೆ. ಅದೂ ಜಗತ್ತಿನಲ್ಲೇ ದೊಡ್ಡ ಉದ್ಯಮವಾಗಿದೆ. ಇದೇ ಇಂಡಸ್ಟ್ರಿ ನಿಮ್ಮ ಖ್ಯಾತಿ ಮಾಸಿಹೋಗುತ್ತಿದ್ದ ವೇಳೆ ನಿಮ್ಮನ್ನು ತೆರೆಯ ಮುಂದೆ ತಂದಿದ್ದು ಎಂದು ಸೋಮವಾರ ಟ್ವೀಟ್ ಮಾಡಿ ಸಲ್ಮಾಖ್ ಖಾನ್‌ಗೆ ಬೆಂಬಲ ಸೂಚಿಸಿದ್ದರು. 
ಭಾಗ್ ಮಿಲ್ಕಾ ಭಾಗ್ ಸಿನಿಮಾ ಬಂದ ನಂತರ 80 ಹರೆಯ ಮಿಲ್ಕಾ ಸಿಂಗ್‌ಗೆ ಹೆಚ್ಚಿನ ಜನಪ್ರಿಯತೆ ಬಂತು ಎಂಬ ಧಾಟಿಯಲ್ಲಿ ಸಲೀಂ ಖಾನ್ ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಮಿಲ್ಕಾ ಸಿಂಗ್, ಸಲೀಂ ಖಾನ್ ತಮ್ಮ ನಿಲುವುಗಳ ಬಗ್ಗೆ ಸ್ಪಷ್ಟ ಪಡಿಸಲಿ. ನಾನು ಇದರ ಬಗ್ಗೆ ಏನೂ ಹೇಳಲಾರೆ. ಒಲಿಂಪಿಕ್ ನಲ್ಲಿ ಭಾಗವಹಿಸುವವರೆಲ್ಲರೂ ನಮ್ಮ ರಾಯಭಾರಿಗಳೇ ಎಂದಿದ್ದರು.
ರಾಯಭಾರಿ ಯಾಕೆ ಬೇಕು ಎಂಬುದರ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಆಲೋಚನೆ ಮಾಡಬೇಕಿತ್ತು. ಶೂಟಿಂಗ್, ಕುಸ್ತಿ, ಬಾಕ್ಸಿಂಗ್ ಅಥವಾ ಅಥ್ಲೆಟಿಕ್ಸ್ ಇದ್ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವವರೆಲ್ಲರೂ ನಮ್ಮ  ರಾಯಭಾರಿಗಳೇ. ಭಾರತದಲ್ಲಿರುವ 12 ಕೋಟಿ ಜನರಲ್ಲಿ ಇವರೇ ರಾಯಭಾರಿಗಳಾಗಿರುವಾಗ ಇನ್ನೊಂದು ರಾಯಭಾರಿಯ ಅಗತ್ಯವೇನಿದೆ?
ಇಲ್ಲಿ ಒಬ್ಬ ರಾಯಭಾರಿಯನ್ನು ನೇಮಕ ಮಾಡುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ರಾಯಭಾರಿ ಬೇಕೇ ಬೇಕು ಎಂದಿದ್ದರೆ ನಮ್ಮಲ್ಲಿರುವ ಖ್ಯಾತ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್,  ಪಿಟಿ ಉಷಾ, ಅಜಿತ್‌ಪಾಲ್ ಸಿಂಗ್, ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದರು.
ಅಲ್ಲಿ ಯಾವುದೇ ಕಾರ್ಯಕ್ರಮವಿದ್ದರೆ ಅವರು ಅಲ್ಲಿ ಚೇರ್‌ಮೆನ್ ಆಗಿ ಕ್ರೀಡಾಪಟುವನ್ನು ಕೂರಿಸುತ್ತಾರೆಯೇ? ಅಥವಾ ರಾಯಭಾರಿಯನ್ನು ಕೂರಿಸುತ್ತಾರೆಯೇ? ನಾನು ನನ್ನ ಕತೆಯನ್ನು ರು.1 ಕ್ಕೆ ನೀಡಿದ್ದೆ. ಅದು ದೊಡ್ಡ ವಿಷಯವಲ್ಲ, ಆ ಸಿನಿಮಾ ಕೋಟಿಗಟ್ಟಲೆ ಗಳಿಸಿತ್ತು.
ಮಿಲ್ಕಾ ಸಿಂಗ್ ತಪ್ಪಾಗಿ ಹೇಳಿದ್ದಾರೆ ಎಂದು  ಸಲ್ಮಾನ್ ಖಾನ್ ಅಪ್ಪ ಹೇಳಿದ್ದರೆ ನನಗೇನೂ ಮಾಡಲಾಗುವುದಿಲ್ಲ. ದೇಶದ ಜನರೆಲ್ಲರೂ ನಾನು ಹೇಳುತ್ತಿರುವುದು ಸರಿ ಎಂದು ನನ್ನ ಜೆತೆಗಿದ್ದಾರೆ. ಅವರೆಲ್ಲರೂ ನನ್ನ ಜತೆ ಇರುವುದರಿಂದ ನಾನು ಹೇಳುವುದು ಸರಿ ಎಂದು ಮಿಲ್ಕಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com