ಕನ್ಹಯ್ಯ ಜಾಮೀನು ರದ್ದು ಕೋರಿ ಅರ್ಜಿ ವಿಚಾರಣೆ ಮಾಡಲಿರುವ ಹೈಕೋರ್ಟ್
ನವದೆಹಲಿ: ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ ನೀಡಿರುವ ಜಾಮೀನು ರದ್ಧು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಗುರುವಾರ ಒಪ್ಪಿಗೆ ನೀಡಿದ್ದು ಜುಲೈ ೧೯ ರೊಳಗೆ ಇದಕ್ಕೆ ಪ್ರತಿಕ್ರಿಯಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.
"ನಾನು ಅರ್ಜಿ ವಿಚಾರಿಸಲಿದ್ದೇನೆ. ಪ್ರತಿಕ್ರಿಯೆ ನೀಡಿ" ಎಂದು ನ್ಯಾಯಾಧೀಶ ಪಿ ಎಸ್ ತೇಜಿ ಹೇಳಿದ್ದಾರೆ.
ಕನ್ಹಯ್ಯ ಕುಮಾರ್ ಜಾಮೀನು ವಜಾ ಕೋರಿ ಎರಡು ಅರ್ಜಿ ಸಲ್ಲಿಸಲಾಗಿದೆ. ಒಂದು ಅರ್ಜಿಯಲ್ಲಿ ಕನ್ಹಯ್ಯ ಜಾಮೀನು ಪಡೆಯಲು ತಪ್ಪು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ದೂರಿ ಅವರ ವಿರುದ್ಧ ಪೂರ್ವ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಲಾಗಿದೆ.
ಬಿಡುಗಡೆಯಾದ ನಂತರವೂ ದೇಶ ವಿರೋಧಿ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕನ್ಹಯ್ಯ ಅವರ ಜಾಮೀನು ವಜಾ ಮಾಡುವಂತೆ ವಕೀಲ ಆರ್ ಪಿ ಲೂಥ್ರಾ ಕೂಡ ಅರ್ಜಿ ಸಲ್ಲಿಸಿದ್ದಾರೆ.
ಮಾರ್ಚ್ ೨ ರಂದು ಕನ್ಹಯ್ಯ ಅವರಿಗೆ ಜಾಮೀನು ನೀಡುವಾಗ ಹೇರಿದ್ದ ನಿರ್ಬಂಧಗಳನ್ನು ಕನ್ಹಯ್ಯ ಮುರಿದಿದ್ದಾರೆ ಎಂದು ಕೂಡ ಅರ್ಜಿದಾರ ತಿಳಿಸಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ದೆಹಲಿ ಪೊಲೀಸರು ಕನ್ಹಯ್ಯ ಅವರನ್ನು ಬಂಧಿಸಿದ್ದ ಮೇಲೆ ಅವರಿಗೆ ಜಾಮೀನು ನೀಡಿದ್ದ ಹೈಕೋರ್ಟ್ "ಯಾವುದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ" ತಾಕೀತು ಮಾಡಿತ್ತು.
"ಕನ್ಹಯ್ಯ ಪ್ರತಿ ದಿನ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹಿಳೆಯರನ್ನು ರೇಪ್ ಮಾಡುತ್ತಿದೆ ಎಂದು ಅವರು ಹೇಳಿದ ಮೇಲಂತೂ ಅವರನ್ನು ತಡೆದುಕೊಳ್ಳಲು ಸಾಧ್ಯವಾಗಳಿಲ್ಲ. ಭಾರತದ ಗೌರವವನ್ನು ಹಾಳು ಮಾಡದಂತೆ ತಡೆಯಲು ಅವರಿಗೆ ನೀಡಿರುವ ಜಾಮೀನು ವಜಾ ಮಾಡಬೇಕು" ಎಂದು ಅರ್ಜಿದಾರ ಕೋರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ