ನವದೆಹಲಿ: ಬಿಜೆಪಿಗೆ ತಾಕತ್ತಿದ್ದರೆ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇಟಲಿ ಕೋರ್ಟ್ ತೀರ್ಪಿನಲ್ಲಿ ಪ್ರಸ್ತಾಪಿತವಾಗಿರುವ ಪಕ್ಷದ ಇತರೆ ನಾಯಕರನ್ನು ಬಂಧಿಸಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಸವಾಲು ಹಾಕಿದ್ದಾರೆ.
'ಈ ಕೆಲಸವನ್ನು ಬಿಜೆಪಿ ಯಾವತ್ತೂ ಮಾಡುವುದಿಲ್ಲ. ಬಿಜೆಪಿ ಐದು ವರ್ಷಗಳ ಕಾಲ ಅವರ ವಿರುದ್ಧ ಬರೀ ಘೋಷಣೆ ಕೂಗಲಿದೆ' ಎಂದು ದೆಹಲಿ ಸಿಎಂ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಕೇಜ್ರಿವಾಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೂ ಕಾಂಗ್ರೆಸ್ ನಾಯಕರ ಮನೆ, ಕಚೇರಿಗಳ ಮೇಲೆ ಏಕೆ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಟಲಿ ಕೋರ್ಟ್ ತೀರ್ಪಿನಲ್ಲಿ ಪ್ರಸ್ತಾಪಿತವಾಗಿರುವ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಇಟಲಿ ಕೋರ್ಟ್ ತೀರ್ಪಿನಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರ ಹೆಸರುಗಳು ಪ್ರಸ್ತಾಪವಾಗಿವೆ.