ಸಾರ್ಕ್ ಸಭೆಯಲ್ಲಿ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಕಟು ಸಂದೇಶ

ಭದ್ರತಾ ಪಡೆ ಯೋಧರಿಂದ ಹತನಾದ ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ...
ಸಾರ್ಕ್ ಗೃಹ ಸಚಿವರ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಇತರರು
ಸಾರ್ಕ್ ಗೃಹ ಸಚಿವರ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಇತರರು
ನವದೆಹಲಿ/ ಇಸ್ಲಾಮಾಬಾದ್: ಭದ್ರತಾ ಪಡೆ ಯೋಧರಿಂದ ಹತನಾದ ಹಿಜ್ ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಘೋಷಿಸಿರುವುದಕ್ಕೆ ಪಾಕಿಸ್ತಾನಕ್ಕೆ ಕಟು ಸಂದೇಶ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದಕರನ್ನು ಹುತಾತ್ಮ ಎಂದು ವೈಭವೀಕರಿಸುವುದು ಅಥವಾ ಸ್ತುತಿಸುವುದನ್ನು ಪಾಕಿಸ್ತಾನ ಮಾಡಬಾರದು ಎಂದು ಹೇಳಿದ್ದಾರೆ.
ಇಸ್ಲಾಮಾಬಾದಿನಲ್ಲಿ ಸಾರ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿ ಹೇಳಿದ ರಾಜನಾಥ್ ಸಿಂಗ್, ''ಒಳ್ಳೆಯ ಅಥವಾ ಕೆಟ್ಟ ಭಯೋತ್ಪಾದನೆ ಎಂಬುದು ಬೇರೆಬೇರೆ ಇಲ್ಲ. ಭಯೋತ್ಪಾದನೆ ಅಂದರೆ ಭಯೋತ್ಪಾದನೆಯಷ್ಟೆ ಎಂದು ಕಟುವಾಗಿ ಹೇಳಿದ್ದಾರೆ.

ಸಾರ್ಕ್ ಸಭೆಯಲ್ಲಿ ರಾಜನಾಥ್ ಸಿಂಗ್ ಅವರ ಭಾಷಣವನ್ನು ಚಿತ್ರೀಕರಿಸಲು ಭಾರತ ಸೇರಿದಂತೆ ಯಾವುದೇ ದೇಶದ ದೇಶದ ಮಾಧ್ಯಮಕ್ಕೆ ಅಲ್ಲದೆ ಪಾಕಿಸ್ತಾನದ ಖಾಸಗಿ ಮಾಧ್ಯಮಗಳಿಗೂ ಅವಕಾಶ ನೀಡಿರಲಿಲ್ಲ.
ಭಯೋತ್ಪಾದಕರ ವಿರುದ್ಧ ಕಠಿಣ ನಿಲುವು ಹೊಂದಬೇಕಲ್ಲದೆ ಭಯೋತ್ಪಾದಕ ಸಂಘಟನೆಗಳು, ಉಗ್ರಗಾಮಿಗಳಿಗೆ ಬೆಂಬಲ ನೀಡುವ ದೇಶ ಮತ್ತು ವ್ಯಕ್ತಿಗಳ ವಿರುದ್ಧವೂ ಅದೇ ರೀತಿಯ ಮನೋಭಾವ ಹೊಂದಬೇಕು ಎಂದು ಹೇಳಿದರು.
ಭಯೋತ್ಪಾದಕರಿಗೆ ಸ್ವರ್ಗ ತಾಣವಾಗಿರುವ ದೇಶಗಳನ್ನು ಪ್ರತ್ಯೇಕವಾಗಿಡಬೇಕು. ''ಯಾರು ಭಯೋತ್ಪಾದಕರಿಗೆ ಬೆಂಬಲ, ಪ್ರೋತ್ಸಾಹ, ರಕ್ಷಣೆ, ಸಹಾಯ ನೀಡುತ್ತಾರೆಯೋ ಅವರನ್ನು ಪ್ರತ್ಯೇಕಿಸಿ ಒಬ್ಬಂಟಿಗಳನ್ನಾಗಿ ಮಾಡಬೇಕು ಎಂದರು.
ಹಿಜ್ ಬುಲ್ ಉಗ್ರ ಬುರ್ಹಾನ್ ವಾನಿ ಹುತಾತ್ಮ ಎಂದು ಪಾಕಿಸ್ತಾನ ಘೋಷಿಸಿ ಆತನನ್ನು ಕೊಂದದ್ದನ್ನು ಖಂಡಿಸಿ ಕಪ್ಪು ದಿನಾಚರಣೆ ಆಚರಿಸಿತ್ತು. ಬುರ್ಹಾನ್ ವಾನಿ ಕಳೆದ ಜುಲೈ 8ರಂದು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಹತನಾಗಿದ್ದ.
ಭಾರತ-ಪಾಕ್ ಸಂಬಂಧ ಹಳಸಿದೆ ಎಂದು ಸಾರ್ಕ್ ಆಂತರಿಕ/ಗೃಹ ಸಚಿವರ ಸಮ್ಮೇಳನದಲ್ಲಿ ಎದ್ದು ಕಾಣುತ್ತಿತ್ತು. ರಾಜನಾಥ್ ಸಿಂಗ್ ಮತ್ತು ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಆಲಿ ಖಾನ್ ಇಂದು ಮುಖಾಮುಖಿಯಾದಾಗ ಒಬ್ಬರಿಗೊಬ್ಬರು ಕೈ ಕುಲುಕಿದ್ದು ಬಿಟ್ಟರೆ ಮಾತುಕತೆಯಾಡಲಿಲ್ಲ.
ಇಸ್ಲಾಮಾಬಾದಿನ ಅತ್ಯಂತ ಸುಸಜ್ಜಿತ ಸೆರೆನಾ ಹೊಟೇಲ್ ನಲ್ಲಿ ಸಮ್ಮೇಳನ ಸ್ಥಳಕ್ಕೆ ರಾಜನಾಥ ಸಿಂಗ್ ತೆರಳುತ್ತಿರುವಾಗ ಗಣ್ಯರನ್ನು ಬರಮಾಡಿಕೊಳ್ಳಲು ನಿಸಾರ್ ಆಲಿ ಖಾನ್ ಗೇಟು ಬಳಿ ನಿಂತಿದ್ದರು. ಇಬ್ಬರು ನಾಯಕರು ಕಾಟಾಚಾರಕ್ಕೆಂಬಂತೆ ಕೈ ಕುಲುಕಿದ್ದು ಬಿಟ್ಟರೆ ಬೇರೇನೂ ಮಾತನಾಡಲಿಲ್ಲ. ಅಲ್ಲದೆ ಇಂದು ಮಧ್ಯಾಹ್ನ ನಿಸಾರ್ ಖಾನ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಕೂಡ ರಾಜನಾಥ್ ಸಿಂಗ್ ಭಾಗವಹಿಸಲಿಲ್ಲ. ಸ್ವತಃ ಖಾನ್ ಕೂಡ ಭಾಗವಹಿಸದ್ದು ವಿಶೇಷವಾಗಿತ್ತು. 
ಈ ಮಧ್ಯೆ ನಿಸಾರ್ ಖಾನ್ ಹೇಳಿಕೆ ನೀಡಿ, ಪಾಕಿಸ್ತಾನ ಸಾರ್ಕ್ ಪ್ರಕ್ರಿಯೆಗೆ ಬದ್ಧವಾಗಿದ್ದು, ಇದೊಂದು ಯಶಸ್ವಿ ಪ್ರಾದೇಶಿಕ ಸಂಸ್ಥೆಯಾಗುವುದನ್ನು ನೋಡಲು ಬಯಸುತ್ತದೆ ಎಂದು ಹೇಳಿದ್ದಾರೆ.
ಇದುವರೆಗೆ ಸಾರ್ಕ್ ಸದಸ್ಯ ರಾಷ್ಟ್ರಗಳು ಮಾಡಿರುವ ಮತ್ತು ಇನ್ನು ಮುಂದೆ ಮಾಡಬೇಕಾಗಿರುವ ಕೆಲಸಗಳ ವಾಸ್ತವ ಪರಿಶೀಲನೆ ಮಾಡಲು ಇದೊಂದು ಸಮಯ ಎಂದು ಪಾಕಿಸ್ತಾನ ಹೇಳಿದೆ.
ರಾಜನಾಥ ಸಿಂಗ್ ಭಾಷಣ ಪ್ರಸಾರಕ್ಕೆ ಪಾಕ್ ನಿರ್ಬಂಧ: ಸಾರ್ಕ್ ಸಮ್ಮೇಳನದ ವರದಿ ಮಾಡಲು ಪಾಕಿಸ್ತಾನ ಸರ್ಕಾರದ ಪಿಟಿವಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿತ್ತು. ಆದರೆ ರಾಜನಾಥ್ ಸಿಂಗ್ ಹಾಗೂ ಇತರ ಪ್ರತಿನಿಧಿಗಳ ಭಾಷಣವನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಭಾರತದ ಮಾಧ್ಯಮಗಳಿಗೂ ಸಹ ಸಮ್ಮೇಳನವನ್ನು ಚಿತ್ರೀಕರಿಸಿ ಪ್ರಸಾರ ಮಾಡಲು ಬಿಡಲಿಲ್ಲ. 
ಇನ್ನೊಂದೆಡೆ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಜನಾಥ್ ಸಿಂಗ್ ಅವರ ಪತ್ರಿಕಾ ಸಂವಾದ ಕೂಡ ರದ್ದುಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com