ನವದೆಹಲಿ: ಡಿಜಿಟಲ್ ಪ್ರಜಾಪ್ರಭುತ್ವ ಭಾರತ ದೇಶಕ್ಕೆ ಅತ್ಯಂತ ಅಗತ್ಯವಾಗಿದ್ದು, ಅದರ ಪ್ರದರ್ಶನಕ್ಕೆ MyGovIndia ಅತ್ಯಂತ ದೊಡ್ಡ ವೇದಿಕೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಶನಿವಾರ ಹೇಳಿದ್ದಾರೆ.
ಎರಡು ವರ್ಷಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವಕ್ಕೆ MyGovIndia ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ MyGovIndia ವೇದಿಕೆಯ ಎರಡನೇ ವರ್ಷಾಚರಣೆ ಸಂದರ್ಭದಲ್ಲಿ "The Spirit of Participatory Democracy with MyGov" ಎಂಬ ಸಮ್ಮೇಳನವನ್ನು ಉದ್ಘಾಟಿಸಿ ಅವರು ಹೀಗೆ ಹೇಳಿದರು.
ಎನ್ ಡಿಎ ಸರ್ಕಾರಕ್ಕೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ವರ್ಷಾಚರಣೆಯನ್ನು ಸುಲಭವಾಗಿ ಯಾವುದಾದರೊಂದು ಹೊಟೇಲ್ ನಲ್ಲಿ ಮಾಡಬಹುದು. ಆದರೆ ಪ್ರಧಾನಿ ಮೋದಿಯವರು ನಮಗೆ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುವಂತೆ ಹೇಳಿದ್ದಾರೆ. ನಾವು ಜನರೊಂದಿಗೆ ಡಿಜಿಟಲಿಯಾಗಿ ಮತ್ತು ವೈಯಕ್ತಿಕವಾಗಿ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.
ಸರ್ಕಾರದ ಸಚಿವರೊಂದಿಗೆ ನೇರವಾಗಿ ಸಂವಾದ ನಡೆಸಲು, ಉತ್ತಮ ಆಡಳಿತ ನಡೆಸಲು ಸರ್ಕಾರಕ್ಕೆ ಸಲಹೆ ನೀಡಲು ಮೈ ಗವರ್ನ್ ಮೆಂಟ್ ಅಭಿಯಾನವನ್ನು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಆರಂಭಿಸಿತ್ತು.
ಇದರಡಿ ಗಂಗಾ ನದಿ ಸ್ವಚ್ಛತೆ, ಹೆಣ್ಣು ಮಕ್ಕಳ ಶಿಕ್ಷಣ, ಡಿಜಿಟಲ್ ಇಂಡಿಯಾ, ಆಹಾರ ಭದ್ರತೆ ಮತ್ತು ಆರೋಗ್ಯ ಭಾರತ ಮೊದಲಾದ ಗುಂಪುಗಳಿದ್ದು, ಸಾರ್ವಜನಿಕರು MyGovIndia ಸೈಟ್ ನಲ್ಲಿ ತಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ನೀಡಬಹುದು. MyGovIndia ನಲ್ಲಿ ಪ್ರಸ್ತುತ 3.52 ದಶಲಕ್ಷ ಸದಸ್ಯರು ದಾಖಲಾಗಿದ್ದಾರೆ.