16 ವರ್ಷಗಳ ಉಪವಾಸ ಅಂತ್ಯ; ಮಣಿಪುರ ಸಿಎಂ ಆಗಬೇಕು ಎಂದ ಇರೋಮ್‌ ಶರ್ಮಿಳಾ

ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ ಕಳೆದ 16 ವರ್ಷಗಳಿಂದ...
ಇರೋಮ್ ಶರ್ಮಿಳಾ
ಇರೋಮ್ ಶರ್ಮಿಳಾ
ಇಂಫಾಲ್: ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ ಕಳೆದ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಇರೋಮ್‌ ಶರ್ಮಿಳಾ ಮಂಗಳವಾರ ಅಂತ್ಯ ಹಾಡಿದ್ದು, ಮುಂದೆ ಮಣಿಪುರದ ಮುಖ್ಯಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದವರ ಮುಂದೆ ಜೇನು ತುಪ್ಪ ಸೇವಿಸುವ ಮೂಲಕ 16 ವರ್ಷಗಳ ಸುದೀರ್ಘ ಉಪವಾಸ ಕೈಬಿಟ್ಟರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇರೋಮ್ ಶರ್ಮಿಳಾ, ನನಗೆ ರಾಜಕೀಯ ಗೊತ್ತಿಲ್ಲ. ಆದರೆ ಕಳೆದ 16 ವರ್ಷದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಹಾಗಾಗಿ ನಾನೀಗ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೇನೆ. ಅದರಲ್ಲೊಂದು ನಾನು ಚುನಾವಣೆಗೆ ಸ್ಪರ್ಧಿಸಿ, ಮಣಿಪುರದ ಮುಖ್ಯಮಂತ್ರಿಯಾಗಿ, ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಪಡಿಸುವ ಇಚ್ಛೆ ನನ್ನದಾಗಿದೆ ಎಂದಿದ್ದಾರೆ.
ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಶರ್ಮಿಳಾ ಅವರಿಗೆ 2000 ಇಸವಿಯಿಂದ ದ್ರವರೂಪದ ಆಹಾರವನ್ನು ಮೂಗಿನ ಮೂಲಕ ಅಳವಡಿಸಲಾಗಿರುವ ನಳಿಕೆಯಿಂದ ನೀಡಲಾಗುತ್ತಿತ್ತು.
ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ  ಸೇನಾ ಯೋಧರು ನಡೆಸುತ್ತಿದ್ದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಖಂಡಿಸಿ ಇರೋಮ್‌ ಶರ್ಮಿಳಾ 2000ನೇ ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ ಸರ್ಕಾರ ಯಾವುದೇ ಧನಾತ್ಮಕ ಪ್ರತಿಕ್ರಿಯೆ ನೀಡದ ಕಾರಣ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ಇನ್ನೂ ಮಣಿಪುರ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುವಂತೆ ಎಎಪಿ ನೀಡಿದ ಆಹ್ವಾನವನ್ನು ಶರ್ಮಿಳಾ ತಿರಸ್ಕರಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡ ಶರ್ಮಿಳಾ ರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಲು ತುದಿಗಾಲಲ್ಲಿ ನಿಂತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com