ನವದೆಹಲಿ: ಬಂಧಿತ ಲಷ್ಕರ್ ಇ ತೋಯ್ಬಾ ಸಂಘಟನೆಯ ಉಗ್ರ ಬಹದುರ್ ಅಲಿ ಪಾಕಿಸ್ತಾನ ಸೈನಿಕರಿಂದಲೇ ತರಬೇತಿ ಪಡೆದಿದ್ದು, ಕಾಶ್ಮೀರ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಪಾಕಿಸ್ತಾನವೇ ಈ ಉಗ್ರನನ್ನು ಭಾರತಕ್ಕೆ ಕಳುಹಿಸಿದೆ ಎಂದು ರಾಷ್ಚ್ರೀಯ ತನಿಖಾ ಸಂಸ್ಥೆ(ಎನ್ಐಎ) ಬುಧವಾರ ಹೇಳಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎನ್ಐಎ ಮಹಾ ನಿರ್ದೇಶಕ ಸಂಜೀವ್ ಸಿಂಗ್ ಅವರು, ಇತ್ತೀಚಿಗೆ ಕಾಶ್ಮೀರದಲ್ಲಿ ಭದ್ರಾತ ಪಡೆಗಳು ಬಂಧಿಸಿದ ಎಲ್ಇಟಿ ಉಗ್ರ ಹಾಗೂ ಪಾಕಿಸ್ತಾನಿ ಪ್ರಜೆ ಬಹದುರ್ ಅಲಿಗೆ ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ಉಗ್ರ ಸಂಘಟನೆಗಳು ನಿರಂತರ ಮಾರ್ಗದರ್ಶನ ಮಾಡುತ್ತಿದ್ದವು ಎಂದು ಹೇಳಿದ್ದಾರೆ.
ಪಾಕ್ ಸೇನಾ ತಜ್ಞರೇ ತನಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದಾಗಿ ಉಗ್ರ ಅಲಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಆತನಿಂದ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಸಿಂಗ್ ಅವರು ತಿಳಿಸಿದ್ದಾರೆ.
ಕಾಶ್ಮೀರದ ಉದ್ವಿಗ್ನ ಪರಿಸ್ಥಿತಿಯ ಲಾಭ ಪಡೆದು ಸ್ಥಳೀಯರೊಂದಿಗೆ ಬೆರೆತು ಸೇನಾಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸುವಂತೆ ಉಗ್ರ ಅಲಿಗೆ ಸೂಚಿಸಲಾಗಿದೆ ಎಂದು ಎನ್ಐಎ ಮಹಾ ನಿರ್ದೇಶಕರು ಹೇಳಿದ್ದಾರೆ.
ಕಳೆದ ಜುಲೈ 25 ರಂದು ಬಹದುರ್ ಅಲಿಯನ್ನು ಬಂಧಿಸಲಾಗಿತ್ತು. ಆತನಿಂದ ಎ.ಕೆ.47 ಬಂದೂಕು, ಗುಂಡುಗಳು, ಗ್ರೆನೇಡ್ಗಳು ಮತ್ತು ಗ್ರೆನೇಡ್ ಲಾಂಚರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜತೆಗೆ ಆತ ಪಾಕಿಸ್ತಾನಿ ಪ್ರಜೆ ಎಂಬುದಕ್ಕೆ ಅಗತ್ಯವಾದ ದಾಖಲೆಗಳನ್ನೂ ಸಹ ವಶಪಡಿಸಿಕೊಳ್ಳಲಾಗಿತ್ತು.