ಮೋದಿ ಸೂಟ್ ಬಗ್ಗೆ ಮತ್ತೆ ರಾಹುಲ್ ಲೇವಡಿ: ಭಾರಿ ತ್ಯಾಗಕ್ಕೆ ಇನಾಮು ಎಂದು ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಧರಿಸಿದ ವಿಶಿಷ್ಟ ಸೂಟ್‌ ಗಿನ್ನೆಸ್ ದಾಖಲೆ ಆಗಿರುವುದರ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಧರಿಸಿದ ವಿಶಿಷ್ಟ ಸೂಟ್‌ ಗಿನ್ನೆಸ್ ದಾಖಲೆ ಆಗಿರುವುದರ ಬಗ್ಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿಯವರ ಭಾರಿ ತ್ಯಾಗಕ್ಕೆ ಇನಾಮು ಎಂದು ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ "ನರೇಂದ್ರ ದಾಮೋದರದಾಸ್‌ ಮೋದಿ' ಎಂಬ ಅಕ್ಷರಗಳ ರೇಖೆಯನ್ನು ಹೊಂದಿದ್ದ ಸೂಟ್‌ ಇದೀಗ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ.

ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಸೂಟ್‌ ಎಂದು ಗಿನ್ನಿಸ್‌ ರೆಕಾರ್ಡ್‌ನಲ್ಲಿ ವಿವರಿಸಲಾಗಿರುವ ಟಿಪ್ಪಣಿಯನ್ನೂ ರಾಹುಲ್‌ ತಮ್ಮ ಟ್ವೀಟ್‌ನೊಂದಿಗೆ ಟ್ಯಾಗ್‌ ಮಾಡಿದ್ದಾರೆ.

ಮೋದಿ ಅವರ ಈ ಸೂಟ್‌ ಅನ್ನು ಗುಜರಾತಿನ ಸೂರತ್‌ ವಜ್ರದ ಉದ್ಯಮಿ ಲಾಲ್‌ಜೀಭಾಯ್‌ ಪಟೇಲ್‌ ಅವರು 4.31 ಕೋಟಿ ರೂ.ಗೆ ಖರೀದಿಸಿದ್ದರು. ಹೀಗಾಗಿ ಇದು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಸೂಟ್‌ ಎಂದು ಗಿನ್ನೆಸ್‌ ದಾಖಲೆ ಸಂಸ್ಥೆ ಪ್ರಮಾಣಪತ್ರ ನೀಡಿದೆ.

2015ರ ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬರಾಕ್‌ ಒಬಾಮಾ ಜತೆ 2015ರ ಜ.26ರಂದು ಮೋದಿ ಅವರು ಈ ಸೂಟ್ ಧರಿಸಿ ದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಅವರು 10 ಲಕ್ಷ ರೂ. ಮೌಲ್ಯದ ಸೂಟ್‌ ಧರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಮೋದಿ ಅವರ ಹೆಸರನ್ನೇ ಬರೆಯುವ ಮೂಲಕ ಸೂಟ್‌ನಲ್ಲಿ ಗೆರೆಗಳನ್ನು ಚಿತ್ರಿಸಿದ್ದು ವಿಶೇಷವಾಗಿತ್ತು. ಇದು ವಿಪಕ್ಷಗಳ ಭಾರಿ ಟೀಕೆಗೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com