ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಲೈಂಗಿಕ ಸುಖ ಬಯಸುವುದನ್ನು ಲಂಚ ಎಂದು ಪರಿಗಣಿಸಬಹುದಾಗಿದ್ದು, ಅಂಥವರಿಗೆ ಶಿಕ್ಷೆ ವಿಧಿಸಬಹುದು ಎಂದು ಸಂಸದೀಯ ಸಮಿತಿ ಶಿಫರಸು ಮಾಡಿದ ಉದ್ದೇಶಿತ ಹೊಸ ಮಸೂದೆಯಲ್ಲಿ ಹೇಳಲಾಗಿದೆ.
ರಾಜ್ಯಸಭೆಯ ಸಮಿತಿ ತನ್ನ ಹೊಸ ಭ್ರಷ್ಟಾಚಾರ ತಡೆ ಮಸೂದೆ ಕುರಿತ ವರದಿಯಲ್ಲಿ, ಕಾನೂನು ಆಯೋಗದ ವರದಿಯನ್ನು ಅನುಸರಿಸಿ ಉದ್ದೇಶಿತ ಶಾಸನದಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ಕೆಲಸ ಮಾಡಿಕೊಡಲು ಜನರಿಂದ ಲಂಚ ಕೇಳಿದರೆ ಮತ್ತು ಸ್ವೀಕರಿಸಿದರೆ ಅದು ಅಪರಾಧವಾಗುತ್ತದೆ. ಇನ್ನು ಲಂಚ ನೀಡುವವರು ಕೂಡ ಅಪರಾಧಿಗಳೆಂದು ಪರಿಗಣಿಸಲ್ಪಡುತ್ತಾರೆ. ಅಲ್ಲದೆ ಯಾರನ್ನಾದರೂ ಲೈಂಗಿಕ ಸುಖಕ್ಕೆ ಬಳಸಿಕೊಳ್ಳಲು ಯತ್ನಿಸಿದರೆ ಅದು ಕೂಡ ಅಪರಾಧವಾಗುತ್ತದೆ ಎಂದು ಹೇಳಿದೆ.
ಲಂಚದ ವ್ಯಾಖ್ಯಾನವನ್ನು ವಿಸ್ತರಿಸಿರುವ ಸಮಿತಿ, ಖಾಸಗಿ ವಲಯಗಳಲ್ಲಿ ಲಂಚ ಸ್ವೀಕರಿಸುವುದನ್ನು ಕೂಡ ಸೇರಿಸಿದೆ. ಕೇಂದ್ರ ಸರ್ಕಾರ, ಭ್ರಷ್ಟಾಚಾರ ವಿರೋಧಿ(ತಿದ್ದುಪಡಿ) ಮಸೂದೆ 2013ನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಸಂದರ್ಭದಲ್ಲಿ ಸಂಸದೀಯ ಸಮಿತಿ ನೀಡಿರುವ ವರದಿ ಮಹತ್ವ ಪಡೆದಿದೆ.