ಕಾಶ್ಮೀರಿಗಳು ಹಿಂಸೆ ಬಯಸುವವರಲ್ಲ, ಶಾಂತಿ ಪ್ರಿಯರು: ಮೆಹಬೂಬ ಮುಫ್ತಿ

ಜಮ್ಮು-ಕಾಶ್ಮೀರದ ವಿರೋಧ ಪಕ್ಷದ ನಾಯಕರ ನಿಯೋಗ ನಿನ್ನೆ(ಸೋಮವಾರ) ದೆಹಲಿಯಲ್ಲಿ ನರೇಂದ್ರ ಮೋದಿಯವರನ್ನು ಭೇಟಿ...
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ(ಸಂಗ್ರಹ ಚಿತ್ರ)
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ(ಸಂಗ್ರಹ ಚಿತ್ರ)
ಶ್ರೀನಗರ: ಜಮ್ಮು-ಕಾಶ್ಮೀರದ ವಿರೋಧ ಪಕ್ಷದ ನಾಯಕರ ನಿಯೋಗ ನಿನ್ನೆ(ಸೋಮವಾರ) ದೆಹಲಿಯಲ್ಲಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಕಾಶ್ಮೀರಿಗಳು ಕಲ್ಲೆಸೆಯುವವರಲ್ಲ, ಕಾಶ್ಮೀರಿ ಜನರ ಕೋಪವನ್ನು ಶಮನ ಮಾಡಿ ಸಂತೈಸಲು, ಪರಕೀಯರು ಎಂಬ ಭಾವನೆ ಅವರ ಮನಸ್ಸಿನಿಂದ ಹೊರ ಹೋಗುವಂತೆ ಮಾಡಲು ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದು ಹೇಳಿದ್ದಾರೆ.
ಜಮ್ಮುವಿನ ಭಗವತಿ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ನೆರೆದಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರದ ಇಂದಿನ ಸ್ಥಿತಿಗತಿಯಲ್ಲಿ ಶಾಂತಿಯನ್ನು ಕಾಪಾಡಿ ಜನರನ್ನು ಸಂತೈಸಲು ನಿರ್ಣಯ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯಿದೆ. ಇದಕ್ಕೆ ರಾಜಕೀಯ ಮತ್ತು ಆರ್ಥಿಕ ಕ್ರಮಗಳು ಕೂಡ ಮುಖ್ಯ ಎಂದರು.
ಕಾಶ್ಮೀರಿಗರಲ್ಲಿ ವಿಶ್ವಾಸ ಬೆಳೆಸುವ ಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು. ಕಾಶ್ಮೀರದ ಸಮಸ್ಯೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಜನರ ವಿಶ್ವಾಸ ಗಳಿಸಿ ಬಗೆಹರಿಸಲು ಪ್ರಯತ್ನಿಸಬೇಕು  ಎಂದು ಮೆಹಬೂಬ ಅಭಿಪ್ರಾಯಪಟ್ಟರು.
ಉಗ್ರಗಾಮಿ ನಾಯಕ ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ, ಗಲಭೆ 46 ದಿನಗಳಾದರೂ ಇನ್ನೂ ನಿಂತಿಲ್ಲ. ಇದುವರೆಗೆ 68 ಮಂದಿ ಮೃತಪಟ್ಟಿದ್ದಾರೆ. ಮೆಹಬೂಬ ಮುಫ್ತಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಾವುದೇ ರೀತಿಯ ಹಿಂಸೆ, ಗಲಭೆಗಳು ಇನ್ನಷ್ಟು ದುಃಖ, ನೋವು ಉಂಟುಮಾಡುತ್ತದೆಯಷ್ಟೇ ಹೊರತು ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
''ಕಾಶ್ಮೀರ ಸಮಸ್ಯೆಗೆ ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಮಾರ್ಗಗಳ ಮೂಲಕ ಮಾತುಕತೆಯಿಂದ ಪರಿಹಾರ ಕಂಡುಕೊಳ್ಳಬಹುದಷ್ಟೆ. ಒಡೆದು ಆಳುವ ನೀತಿಯಿಂದ ಹೊರಬಂದು ಘನತೆ, ಗೌರವಗಳಿಂದ ಜನರ ಸಮಸ್ಯೆಗಳನ್ನು ಬಗೆಹರಿಸುವ ಸಮಯ ಬಂದಿದೆ. ರಾಜಕೀಯ ಅನಿಶ್ಚಿತತೆಯಿಂದಾಗಿಯೇ ಕಳೆದ ಏಳು ದಶಕಗಳಿಂದ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ ಎಂದರು.
ಕಾಶ್ಮೀರ ಜನರು ಶಾಂತಿ ಪ್ರಿಯರು. ಹಿಂಸೆಯನ್ನು ಬಯಸುವವರಲ್ಲ. ಅವರು ಕಲ್ಲೆಸೆಯುವ ಸಂಸ್ಕೃತಿಯವರಲ್ಲ. ತಮ್ಮ ಅಂಗಡಿಗಳನ್ನು ತೆರೆಯಲು ಬಯಸುತ್ತಾರೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಇಷ್ಟಪಡುತ್ತಾರೆ. ಭಯಮಿಶ್ರಿತ ವಾತಾವರಣದಲ್ಲಿ ಜೀವನ ಮಾಡಲು ಬಯಸುವುದಿಲ್ಲ. ಕಾಶ್ಮೀರಿಗಳು ನಮ್ಮ ಜನರು, ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಕೆಲಸ. ಉಗ್ರಗಾಮಿಗಳು, ಭದ್ರತಾ ಪಡೆಗಳ ಕೈಯಲ್ಲಿ ಬಂದೂಕು, ಕಲ್ಲೆಸೆಯುವುದರಿಂದ ಪರಿಹಾರ ಹುಡುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಅವರು ಕೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com