ಸಂಪುಟ ಸಹೋದ್ಯೋಗಿಗಳಿಗಿಂತ ಕಡಿಮೆ ಆಸ್ತಿ ಹೊಂದಿರುವ ಪ್ರಧಾನಿ ಮೋದಿ!

ನರೇಂದ್ರ ಮೋದಿ
ನರೇಂದ್ರ ಮೋದಿ



ಪ್ರಧಾನಿ ನರೇಂದ್ರ ಮೋದಿ ತಮ್ಮ ಹಲವು ಸಹೋದ್ಯೋಗಿಗಳಿಗಿಂತಲೂ ಕಡಿಮೆ ಸಂಪತ್ತು ಹೊಂದಿದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.

2015-16 ರ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡಿರುವ ಆಸ್ತಿ ವಿವರದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ತಾವು ಬರೆದಿರುವ ಪುಸ್ತಕಗಳು ಹಾಗೂ ತಮ್ಮ ಬಗ್ಗೆ ಬರೆಯಲಾಗಿರುವ ಪುಸ್ತಕಗಳಿಂದ 12.35 ಲಕ್ಷ ರೂಪಾಯಿ ಗೌರವಧನ ಪಡೆದಿದ್ದಾರೆ.    

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯ ವೆಬ್ ಸೈಟ್ ಪ್ರಕಟಿಸಿರುವ ಮಾಹಿತಿ ಪ್ರಕಾರ ಕಳೆದ ವರ್ಷ 4,500 ರೂಪಾಯಿ ನಗದು ಹೊಂದಿದ್ದ ಪ್ರಧಾನಿ ಮೋದಿ ಮಾರ್ಚ್ 2016 ರ ವೇಳೆಗೆ 89,700 ರೂಪಾಯಿ ನಗದು ಹೊಂದಿದ್ದಾರೆ. ಈ ಅಂಕಿ-ಅಂಶಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.  ಗಾಂಧಿನಗರದ ಉಳಿತಾಯ ಖಾತೆಯಲ್ಲಿ 2.10 ಲಕ್ಷ ರೂಪಾಯಿ ಹೊಂದಿರುವ ಪ್ರಧಾನಿ ಮೋದಿ, ಸ್ಥಿರ ಠೇವಣಿ ಖಾತೆಯಲ್ಲಿ 50 ಲಕ್ಷ ರುಪಾಯಿ ಹೊಂದಿದ್ದಾರೆ, ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇರುವ ಏಕೈಕ ಸ್ಥಿರಾಸ್ತಿ ಎಂದರೆ ಅದು ಗಾಂಧಿನಗರದಲ್ಲಿರುವ 1 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ ಮೆಂಟ್ ಆಗಿದೆ.    

ಒಟ್ಟಾರೆ ಪ್ರಧಾನಿ ಮೋದಿ ಅವರ ಬಳಿ ಇರುವ ಚರಾಸ್ಥಿಯ ಒಟ್ಟು ಮೌಲ್ಯ 73.36 ಲಕ್ಷ ರೂಪಾಯಿಯಾಗಿದೆ. ಇದನ್ನು ಹೊರತುಪಡಿಸಿದರೆ ಪ್ರಧಾನಿ ನರೇಂದ್ರ ಮೋದಿ ಬಳಿ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡಗಳಿಲ್ಲ. ಪ್ರಧಾನಿ ವೆಬ್ ಸೈಟ್ ನಲ್ಲಿ, ಕೇಂದ್ರ ಸಚಿವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸದಾನಂದ ಗೌಡ, ರಾಮ್ ವಿಲಾಸ್ ಪಾಸ್ವಾನ್, ಮನೇಕಾ ಗಾಂಧಿ, ಪ್ರಕಾಶ್ ಜಾವಡೇಕರ್ ಹಾಗೂ ವೆಂಕಯ್ಯ ನಾಯ್ಡು ಅವರ ಆಸ್ತಿ ವಿವರಗಳನ್ನು ಪ್ರಕಟಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com