ಉದ್ಯೋಗ ನೇಮಕಾತಿ ನಿಯಮ ಪಾಲಿಸದ 30 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಐಐಟಿ

ದೇಶಾದ್ಯಂತ ಇರುವ ಐಐಟಿಗಳು ತಮ್ಮ ಮೊದಲ ಬಹುದೊಡ್ಡ ಸರ್ಜರಿಯಲ್ಲಿ 30 ಕಂಪೆನಿಗಳನ್ನು ಒಂದು ವರ್ಷದವರೆಗೆ ಕಪ್ಪುಪಟ್ಟಿಗೆ ಸೇರಿಸಿದ್ದು...
ಐಐಟಿ ಕೇಂದ್ರವೊಂದರ ಪ್ರವೇಶ ದ್ವಾರ
ಐಐಟಿ ಕೇಂದ್ರವೊಂದರ ಪ್ರವೇಶ ದ್ವಾರ
ಚೆನ್ನೈ: ದೇಶಾದ್ಯಂತ ಇರುವ ಐಐಟಿಗಳು ತಮ್ಮ ಮೊದಲ ಬಹುದೊಡ್ಡ ಸರ್ಜರಿಯಲ್ಲಿ 30 ಕಂಪೆನಿಗಳನ್ನು ಒಂದು ವರ್ಷದವರೆಗೆ ಕಪ್ಪುಪಟ್ಟಿಗೆ ಸೇರಿಸಿದ್ದು, ಅವುಗಳಲ್ಲಿ 28 ಸ್ಟಾರ್ಟ್-ಅಪ್ ಕಂಪೆನಿಗಳಿವೆ. ಅಂದರೆ ಇನ್ನು ಒಂದು ವರ್ಷದವರೆಗೆ ಮುಂದಿನ ಕ್ಯಾಂಪಸ್  ನಿಯೋಜನೆಯಲ್ಲಿ ಈ ಕಂಪೆನಿಗಳು ಭಾಗವಹಿಸಿ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಂತಿಲ್ಲ. ಆಸಕ್ತಿಕರ ವಿಷಯವೆಂದರೆ ಕೊನೆ ಗಳಿಗೆಯಲ್ಲಿ ಪೂರ್ವೋತ್ತರ ಸಮಸ್ಯೆಗಳನ್ನು ಮತ್ತು ಬದ್ಧತೆಗಳನ್ನು ಈಡೇರಿಸಿಕೊಂಡಿರುವ ಫ್ಲಿಪ್ ಕಾರ್ಟ್ ಗೆ ವಿನಾಯಿತಿ ನೀಡಲಾಗಿದೆ.
ಎಲ್ಲಾ ಐಐಟಿಗಳ ನಿಯೋಜನಾ ಸಮಿತಿಯ ಸಭೆ ಐಐಟಿ ಕಾನ್ಪುರದಲ್ಲಿ ಕಳೆದ 14ರಂದು ನಡೆದಿತ್ತು. ಇಲ್ಲಿ ಈ ಅವಿರೋಧ ತೀರ್ಮಾನವನ್ನು ಮಾಡಲಾಯಿತು. ಐಐಟಿ ಗುವಾಹಟಿಯ ವೃತ್ತಿ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಮತ್ತು ಸಂಚಾಲಕ ಕೌಸ್ತುಭಾ ಮೊಹಂತಿ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. ಐಐಟಿ ಮದ್ರಾಸ್ ನ ತರಬೇತಿ ಮತ್ತು ನಿಯೋಜನೆ ಸಲಹೆಗಾರ ಬಾಬು ವಿಶ್ವನಾಥನ್ ಸಭೆಯಲ್ಲಿ ಭಾಗವಹಿಸಿ ಒಪ್ಪಿಗೆ ನೀಡಿದರು.
ಕಂಪೆನಿಗಳ ಇತ್ತೀಚಿನ ಬಿಕ್ಕಟ್ಟಿನಿಂದಾಗಿ 135 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿತ್ತು.
30 ಕಂಪೆನಿಗಳು ಹಲವು ಕಾರಣಕ್ಕಾಗಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.ಪ್ರಸ್ತಾಪ ಪತ್ರವನ್ನು(ಆಫರ್ ಲೆಟರ್)ನ್ನು ರದ್ದುಪಡಿಸಿದ್ದು, ಕೆಲಸಕ್ಕೆ ಸೇರುವ ದಿನಾಂಕವನ್ನು ವಿಳಂಬ ಮಾಡಿದ್ದು, ವೇತನ ಪ್ಯಾಕೇಜ್ ನಿಂದ ಹಿಂದೆ ಸರಿದದ್ದು ಇತ್ಯಾದಿ ಕಾರಣಗಳು ಸೇರಿವೆ.
ಕಪ್ಪುಪಟ್ಟಿಗೆ ಸೇರಿದ ಕಂಪೆನಿಗಳು 3ನೇ ವರ್ಗಕ್ಕೆ ಸೇರಿದ ಕಂಪೆನಿಗಳಾಗಿವೆ. ವರ್ಗ 1 ಮತ್ತು ವರ್ಗ 2ರ ಅಡಿಯಲ್ಲಿ ಬರುವ 12 ಕಂಪೆನಿಗಳಿದ್ದು, ಅವುಗಳಿಗೂ ಕೂಡ ಐಐಟಿಯ ನಿಯೋಜನಾ ಸಮಿತಿ ಎಚ್ಚರಿಕೆ ಪತ್ರ ಕಳುಹಿಸಿದ್ದು, ಆ ಕಂಪೆನಿಗಳ ಹೆಸರು ಬಹಿರಂಗಪಡಿಸದಂತೆ ಐಐಟಿ ಕೇಂದ್ರ ಸಂಸ್ಥೆ ನಿರ್ಧರಿಸಿದೆ.
ಕಪ್ಪುಪಟ್ಟಿಗೆ ಸೇರ್ಪಡೆಗೊಂಡ ಕಂಪೆನಿಗಳು ಒಂದು ವರ್ಷದ ನಂತರ ಕ್ಯಾಂಪಸ್ ಗೆ ಬರಲು ಬಯಸಿದರೆ, ಪ್ರಸ್ತಾಪ ಪತ್ರವನ್ನು ಅಭ್ಯರ್ಥಿಗಳಿಗೆ ನೀಡುವುದರಿಂದ ಹಿಂದೆ ಸರಿದದ್ದೇಕೆ ಎಂದು ಸಮರ್ಥನೆ ನೀಡಬೇಕು. ಅನೇಕ ಬಾರಿ ಸಮಿತಿ ಕಂಪೆನಿಗಳಿಗೆ ಪತ್ರ ಬರೆದಿದ್ದರೂ ಕೂಡ ಈ ಕಂಪೆನಿಗಳು ಪ್ರತ್ಯುತ್ತರ ನೀಡಲು ನಿರಾಕರಿಸಿವೆ. ಹಾಗಾಗಿ ನಿಷೇಧವನ್ನು ಹಿಂತೆಗೆದುಕೊಳ್ಳುವ ಮುನ್ನ ಕಂಪೆನಿಗಳ ಪ್ರತಿನಿಧಿಗಳು ಬಂದು ಸಮಿತಿಯ ಸದಸ್ಯರ ಮುಂದೆ ಚರ್ಚೆ ನಡೆಸಿ ವಿವರಣೆ ನೀಡಬೇಕು. ಕೆಲ ಉದ್ಯೋಗ ನೇಮಕಾತಿದಾರರು ಕಳೆದುಹೋದರೂ ಚಿಂತೆಯಿಲ್ಲ. ಕಂಪೆನಿಗಳಿಗೆ ಬಲವಾದ ಸಂದೇಶ ಕಳುಹಿಸುವುದು ನಮ್ಮ ಉದ್ದೇಶ ಎಂದು ಮೊಹಾಂತಿ ತಿಳಿಸಿದ್ದಾರೆ.
ಫ್ಲಿಪ್ ಕಾರ್ಟ್ ವಿರುದ್ಧ ಯಾವುದೇ ಕ್ರಮವನ್ನು ಐಐಟಿ ತೆಗೆದುಕೊಂಡಿಲ್ಲ. ಪ್ರಮುಖ ಇ-ವಾಣಿಜ್ಯ ಕಂಪೆನಿಯಾದ ಫ್ಲಿಪ್ ಕಾರ್ಟ್ ತನ್ನ ಬದ್ಧತೆಯನ್ನು ಈಡೇರಿಸಿದೆ. ನಿಯಮ, ಷರತ್ತುಗಳಿಗೆ ಅನುಗುಣವಾಗಿ ಈ ವರ್ಷ ಜೂನ್ ಆರಂಭದಲ್ಲಿ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.
ಇನ್ನೆರಡು ಪ್ರಮುಖ ಸ್ಟಾರ್ಟ್-ಅಪ್ ಗಳಾದ ರೋಡ್ ರನ್ರ ಮತ್ತು ಕ್ಲಿಕ್ ಲ್ಯಾಬ್ಸ್ ಗಳನ್ನು ಕೂಡ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಎಐಪಿಸಿ ಸಂಚಾಲಕರು ತಿಳಿಸಿದ್ದಾರೆ.
ಝೊಮ್ಯಾಟೊ ಕಂಪೆನಿ ಮೇಲೆ 2015ರಲ್ಲಿ ವಿಧಿಸಲಾಗಿದ್ದ ನಿಷೇಧ ಇನ್ನೊಂದು ವರ್ಷದವರೆಗೆ ಮುಂದುವರಿಯಲಿದೆ. 
ಕಪ್ಪುಪಟ್ಟಿಗೆ ಸೇರಿದ ಕಂಪೆನಿಗಳು: ಝೆಟ್ಟಾಟ, ನೊವ್ಲೋಟ್ಸ್, ಕಾನ್ಸುಲ್ಟೇನ್, ಝಿಂಪ್ಲಿ, ಪೆಪ್ಪರ್ ಟ್ಯಾಪ್, ಪೊರ್ಟಿಯಾ ಮೆಡಿಕಲ್, ಬಾಬಾಜಾಬ್ಸ್, ಜಿಪಿಎಸ್ ಕೆ, ಹಾಪ್ ಸ್ಕಾಚ್, ಸ್ಮಾರ್ಟ್ರಾಕ್ ಸೋಲಾರ್ ಸಿಸ್ಟಮ್ಸ್ ಪ್ರೈ.ಲಿ, ಕ್ರೇಯಾನ್ ಡಾಟಾ ಇಂಡಿಯಾ ಪ್ರೈ.ಲಿ, ಗ್ಲೊ ಹೋಮ್ಸ್ ಟೆಕ್ನಾಲಜೀಸ್ ಪ್ರೈ.ಲಿ, ಟೆಸ್ಕ್ರಾ ಸಾಫ್ಟ್ ವೇರ್ ಪ್ರೈ.ಲಿ, ಗ್ರೊಫರ್ಸ್, ಟೆನೊವಾ ಇಂಡಿಯಾ ಪ್ರೈ,ಲಿ, ವೆರೈಟಿ ನಾಲೆಡ್ಜ್ ಸೊಲ್ಯೂಷನ್, ಎಕ್ಸಲೆನ್ಸ್ ಟೆಕ್, ಸ್ಟೆಜಿಲ್ಲಾ, ರೋಡ್ರನ್ರ, ಲೆಕ್ಸಿನ್ನೋವಾ ಟೆಕ್ನಾಲಜೀಸ್, ಲೆಗಾರ್ಡೆ ಬರ್ನೆಟ್ಟ್ ಗ್ರೂಪ್, ಜಾನ್ಸನ್ ಎಲೆಕ್ಟ್ರಿಕ್, ಜಪಾನ್, ಮೆರಾ ಹುನಾರ್, ಫಂಡಮೆಂಟಲ್ ಎಜುಕೇಶನ್, ಕ್ಯಾಶ್ ಕೇರ್ ಟೆಕ್ನಾಲಜೀಸ್, ಹೊಲಮಡ್, ಇಂಡಸ್ ಇನ್ಸೈಟ್, ಕ್ಲಿಕ್ ಲ್ಯಾಬ್ಸ್, ಗ್ರಾಬ್ ಹೌಸ್ ಮತ್ತು ಮೆಡ್ಡ್ ಕಂಪೆನಿಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com