ಕಾಶ್ಮೀರದಲ್ಲಿ ಕಳೆದುಕೊಂಡದ್ದು ಇಡೀ ದೇಶಕ್ಕಾದ ನಷ್ಟ: ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ನಾಗರಿಕರಾಗಿರಲಿ, ಯೋಧರಾಗಿರಲಿ ಇದುವರೆಗೆ ಮೃತಪಟ್ಟವರ ಬಗ್ಗೆ ಅನುಕಂಪವಿದೆ. ಅವರ ಸಾವಿನಿಂದ ಆದ ನಷ್ಟ ಇಡೀ ದೇಶಕ್ಕಾದ ನಷ್ಟ...
ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ನವದೆಹಲಿ: ಈ ಬಾರಿಯ ಮನ್ ಕಿ ಬಾತ್ 23ನೇ ಸರಣಿ ಭಾಷಣದಲ್ಲಿ ಗಣೇಶ ಉತ್ಸವದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಜನರು ರಾಸಾಯನಿಕ, ಬಣ್ಣದ ಗೌರಿ-ಗಣೇಶ ಮೂರ್ತಿಯ ಬದಲಾಗಿ ನೈಸರ್ಗಿಕವಾದ ಮಣ್ಣಿನ ಮೂರ್ತಿಯನ್ನು ತಂದು ಪೂಜಿಸುವಂತೆ ಕರೆ ನೀಡಿದ್ದಾರೆ.
ರಾಸಾಯನಿಕ ಬಣ್ಣಗಳಿಂದ ಪರಿಸರ, ನೀರು ಮಲಿನವಾಗುತ್ತದೆ. ಆದುದರಿಂದ ಹೆಚ್ಚೆಚ್ಚು ಮಣ್ಣಿನ ಗಣೇಶ ಮತ್ತು ದುರ್ಗೆಯ ವಿಗ್ರಹಗಳನ್ನು ತಂದು ಪೂಜೆ ಮಾಡಿ. ನಮ್ಮ ಪರಿಸರವನ್ನು ರಕ್ಷಿಸಿದರೆ ದೇವರನ್ನು ಪೂಜಿಸಿದಂತೆಯೇ. ಇದರಿಂದ ಪರಿಸರ ಹಾಳಾಗುವುದನ್ನು ತಪ್ಪಿಸಬಹುದಲ್ಲದೆ, ಪರಿಸರ ಸ್ನೇಹಿ ಗಣಪನನ್ನು ತಯಾರಿಸುವವರಿಗೆ ಆದಾಯವನ್ನು ಒದಗಿಸಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಮಾನ್ಯ ತಿಲಕರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಲೋಕಮಾನ್ಯ ಬಾಲಗಂಗಾಧರ ನಾಥ ತಿಲಕರು ಹೇಳಿದ ಘೋಷವಾಕ್ಯವನ್ನು ನೆನಪಿಸಿಕೊಂಡರು. ಇಂದಿಗೂ ದೇಶಾದ್ಯಂತ ಜನರು ಇದೇ ಹುರುಪಿನಿಂದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದು, ಸಾಮಾನ್ಯ ಜನಜೀವನದಲ್ಲಿ ಹಬ್ಬ ಹರಿದಿನಗಳ ಆಚರಣೆ ಭಾವನಾತ್ಮಕ ಸಂಬಂಧವನ್ನು ಬೆಸೆಯುತ್ತವೆ ಎಂದರು.
ಸೆಪ್ಟೆಂಬರ್ 4ರಂದು ಮದರ್ ತೆರೆಸಾ ಅವರನ್ನು ಸಂತರ ಪಟ್ಟಿಗೆ ಸೇರಿಸಲಾಗುವುದು. ಅವರು ತಮ್ಮ ಜೀವಿತಾವಧಿಯನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ಸ್ಮರಿಸಿದರು.
ಸ್ವಚ್ಛ ಗಂಗಾ ಅಭಿಯಾನ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಆಗಸ್ಟ್ 20ರಂದು ಅಲಹಾಬಾದಿನಲ್ಲಿ ಸ್ವಚ್ಛ ಗಂಗಾ ಯೋಜನೆಗೆ ಜನರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಗ್ರಾಮದ ಮುಖ್ಯಸ್ಥರು ಜನರು ಬಹಿರ್ದೆಸೆ ಮಾಡಿದ್ದನ್ನು ಗಂಗಾ ನದಿಗೆ ಹೋಗುವುದನ್ನು ನಿಲ್ಲಿಸಿ ಶೌಚಾಲಯ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಗಂಗಾ ನದಿ ಸ್ವಚ್ಛತೆ ನಿಟ್ಟಿನಲ್ಲಿ ಗ್ರಾಮದ ಜನರು ತೆಗೆದುಕೊಂಡ ನಿರ್ಧಾರ ಪ್ರಶಂಸನೀಯ ಎಂದರು. ಕ್ಲೀನ್ ಇಂಡಿಯಾ ಬಗ್ಗೆ ಕಿರು ಚಿತ್ರ ತಯಾರಿಸಿ ದೇಶವಾಸಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದ್ದಾರೆ.
ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಮೋದಿ: ನೆರೆ ದೇಶಗಳೊಂದಿಗೆ ಭಾರತ ಎಂದೆಂದಿಗೂ ಆರೋಗ್ಯಕರ ಉತ್ತಮ ಸಂಬಂಧ ಹೊಂದಿರಲು ಬಯಸುತ್ತದೆ. ಕಾಶ್ಮೀರದಲ್ಲಿನ ಮುಗ್ಧರನ್ನು ಬಳಸಿಕೊಂಡು ಹಿಂಸಾಚಾರವೆಸಗಲು ಪ್ರಯತ್ನಿಸುತ್ತಿರುವ ಜನರು ಅಲ್ಲಿನ ಯುವಕರಿಗೆ ಮುಂದೊಂದು ದಿನ ಉತ್ತರ ಕೊಡಬೇಕಾಗುತ್ತದೆ. ಕಾಶ್ಮೀರದಲ್ಲಿ ನಾಗರಿಕರಾಗಿರಲಿ, ಯೋಧರಾಗಿರಲಿ ಇದುವರೆಗೆ ಮೃತಪಟ್ಟವರ ಬಗ್ಗೆ ಅನುಕಂಪವಿದೆ. ಅವರ ಸಾವಿನಿಂದ ಆದ ನಷ್ಟ ಇಡೀ ದೇಶಕ್ಕಾದ ನಷ್ಟ ಎಂದು ಖೇದ ವ್ಯಕ್ತಪಡಿಸಿದರು.
ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿಗೆ ಒಪ್ಪಿಗೆ ನೀಡಿರುವುದು, ದೇಶದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ ಎಂದು ತೋರಿಸುತ್ತದೆ. ಒಂದು ವಿಷಯದ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ಸಹಮತ ತೋರಿಸಿದರೆ ಸಾಕಷ್ಟು ಪ್ರಗತಿ ಹೊಂದಲು ಸಾಧ್ಯ. ತಮ್ಮ ಎಲ್ ಪಿಜಿ ಗಿವ್ ಇಟ್ ಅಪ್ ಅಭಿಯಾನಕ್ಕೆ ಬೆಂಬಲ ನೀಡಿ ಪತ್ರ ಬಂದಿರುವುದನ್ನು ಭಾಷಣದಲ್ಲಿ ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com