ಪಾಕ್ ನ್ನು ಕಂಗೆಡಿಸಲು ಮತ್ತೊಂದು ತಂತ್ರ: ಎಐಆರ್ ನಿಂದ ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮ!
ನವದೆಹಲಿ: ಬಲೂಚಿಸ್ಥಾನದ ವಿಷಯದಲ್ಲಿ ಪಾಕಿಸ್ಥಾನವನ್ನು ಕಂಗೆಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ತಂತ್ರ ರೂಪಿಸಿದ್ದು, ಬಲೂಚಿ ಭಾಷೆಯಲ್ಲಿ ಶೀಘ್ರವೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ ಎಂಬ ವರದಿ ಪ್ರಕಟವಾಗಿದೆ.
ಆಲ್ ಇಂಡಿಯಾ ರೇಡಿಯೋ ಅಧಿಕೃತ ಮೂಲಗಳ ಪ್ರಕಾರ, ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ಥಾನದ ವಿಮೋಚನೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಂದಿನಿಂದ ಪಾಕಿಸ್ಥಾನ ತನ್ನದೇ ಪ್ರಾಂತ್ಯವಾದ ಬಲೂಚಿಸ್ಥಾನದ ಪ್ರದೇಶದಲ್ಲಿ ಪ್ರತ್ಯೇಕತೆಯ ಕೂಗನ್ನು ಅಡಗಿಸಲು ಅಮಾನವೀಯ ದೌರ್ಜನ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಇನ್ನು ಬಲೂಚಿಸ್ಥಾನದ ವಿಷಯದಲ್ಲಿ ಮಧ್ಯಪ್ರವೇಶಿಸಿರುವ ಭಾರತದ ಕ್ರಮಕ್ಕೆ ಚೀನಾ ಸಹ ವಿರೋಧ ವ್ಯಕ್ತಪಡಿಸಿದೆ. ಆದರೆ ಬಲೂಚಿಸ್ಥಾನದ ಪ್ರತ್ಯೇಕತೆಗಾಗಿ ಹೋರಾಡುತ್ತಿರುವ ನಾಯಕರು ಅಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ತೆರೆದಿಡಲು ನೆರವಾದ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಲ್ ಇಂಡಿಯಾ ರೇಡಿಯೋಗೆ ಬಲೂಚಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲು ಅನುಮತಿ ನೀಡಿದೆ ಎಂಬ ವರದಿ ಪ್ರಕಟವಾಗಿದೆ.