ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನೋಟುಗಳ ನಿಷೇಧಕ್ಕೆ ಜನರ ಬೆಂಬಲ ಸಿಕ್ಕಿದೆ: ಪ್ರಧಾನಿ ಮೋದಿ

ಸಂಸತ್ತಿನ ಹೊರಗೆ ತಮ್ಮ ನೋಟುಗಳ ಅಪಮೌಲ್ಯ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು...
Published on
ನವದೆಹಲಿ: ಸಂಸತ್ತಿನ ಹೊರಗೆ ತಮ್ಮ ನೋಟುಗಳ ಅಪಮೌಲ್ಯ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಬಯಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ವಿಷಯ ಕುರಿತು ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಗದ್ದಲವೆಬ್ಬಿಸುತ್ತಿವೆ. ಸರಿಯಾಗಿ ಚರ್ಚೆ ಮಾಡಲು ಬಿಡುತ್ತಿಲ್ಲ ಎಂದು ದೂರಿದರು.
ನವೆಂಬರ್ 16ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದ, ಪ್ರಧಾನಿಯವರು ನೋಟುಗಳ ನಿಷೇಧ ಕುರಿತು ಸದನದಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿವೆ. 
ಇಂದು ಕೂಡ ರಾಜ್ಯಸಭೆಯಲ್ಲಿ ಸದಸ್ಯರು, ಕಳೆದ ನವೆಂಬರ್ 8ರಿಂದ ದೇಶದ ಸಾಮಾನ್ಯ ನಾಗರಿಕರಿಗೆ ನೋಟುಗಳ ನಿಷೇಧದಿಂದ ತುಂಬಾ ತೊಂದರೆಯಾಗುತ್ತಿದ್ದು ಪ್ರಧಾನಿಯವರು ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ತೃಪ್ತರಾಗದ ಪ್ರತಿಪಕ್ಷದ ನಾಯಕರು ಪ್ರಧಾನಿಯೇ ಖುದ್ದು ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ತೀವ್ರ ಗದ್ದಲದ ನಡುವೆ ಕಲಾಪವನ್ನು ಮುಂದೂಡಲಾಯಿತು.
ಇಂದು ಬೆಳಗ್ಗೆ ನಡೆದ ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಮತ್ತೆ ಸಮರ್ಥಿಸಿಕೊಂಡ ಪ್ರಧಾನಿ, ದೇಶದ ದೊಡ್ಡ ಸುಧಾರಣಾ ಕ್ರಮಕ್ಕೆ ನಮಗೆ ದೇಶದ ಜನ ಬೆಂಬಲ ನೀಡಿದ್ದಾರೆ ಎಂದರು.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ನೋಟುಗಳ ನಿಷೇಧ ಕುರಿತು ಸರ್ಕಾರಕ್ಕೆ ಜನರ ಬೆಂಬಲ ಸಿಕ್ಕಿದೆ. ಕೆಲ ವಿರೋಧ ಪಕ್ಷಗಳು ಮಾಡುತ್ತಿರುವ ಪ್ರತಿಭಟನೆ, ವಿರೋಧ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಪ್ರಧಾನಿಯವರು ಎರಡೂ ಸದನಗಳಲ್ಲಿ ಮಾತನಾಡಲು ಬಯಸಿದ್ದಾರೆ. ಆದರೆ ವಿರೋಧ ಪಕ್ಷದವರೇ ತಮ್ಮ ಗುರಿಯನ್ನು ಬದಲಾಯಿಸುತ್ತಿರುತ್ತಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದರು.
ಭಾರತ ನಗದುರಹಿತ ಮತ್ತು ಡಿಜಿಟಲ್ ಆರ್ಥಿಕತೆಯತ್ತ ಸಾಗಲು ಸಂಸದರು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಪ್ರಚಾರ ಮಾಡಿದಂತೆ ಇದನ್ನೂ ಮಾಡಬೇಕೆಂದು ಕರೆ ನೀಡಿದರು.
ಪ್ರಧಾನಿಯವರು ನೋಟುಗಳ ನಿಷೇಧ ಕುರಿತು ಮಾತನಾಡಲು ಚರ್ಚೆಗೆ ಅವಕಾಶ ನೀಡಲು ನಿಲುವಳಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com