ನೋಟು ನಿಷೇಧದ ಬಗ್ಗೆ ಮಾಹಿತಿ ಇದ್ದಿದ್ದು 6 ಜನರಿಗೆ ಮಾತ್ರ!

ನೋಟು ನಿಷೇಧವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಗಾಗಿ ಪ್ರಧಾನಿ ಮೋದಿ ಆಯ್ಕೆ ಮಾಡಿದ್ದು, ಹಸ್ ಮುಖ್ ಅಧಿಯಾ ಎಂಬ ಹಣಕಾಸು ಇಲಾಖೆಯ ಅಧಿಕಾರಿಯನ್ನು.
ನರೇಂದ್ರ ಮೋದಿ- ಹಸ್ ಮುಖ್ ಅಧಿಯಾ
ನರೇಂದ್ರ ಮೋದಿ- ಹಸ್ ಮುಖ್ ಅಧಿಯಾ
Updated on
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನ.8 ರಂದು 500, 1000 ರೂ ನೋಟು ನಿಷೇಧದ ಘೋಷಣೆಯನ್ನು ಮಾಡಿದ ಒಂದು ತಿಂಗಳ ನಂತರ ಅದಕ್ಕೆ ಸಂಬಂಧಿಸಿದ ತಯಾರಿಗಳ ಬಗ್ಗೆ ಅಚ್ಚರಿಯ ಮಾಹಿತಿಗಳು ಬಹಿರಂಗವಾಗತೊಡಗಿವೆ.  ನೋಟು ನಿಷೇಧವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯನ್ನು ಪ್ರಧಾನಿ ಮೋದಿ ಅತ್ಯಂತ ಗೌಪ್ಯವಾಗಿಟ್ಟಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ ಆಯ್ಕೆ ಮಾಡಿದ್ದು, ಹಸ್ ಮುಖ್ ಅಧಿಯಾ ಎಂಬ ಹಣಕಾಸು ಇಲಾಖೆಯ ಅಧಿಕಾರಿಯನ್ನು. 
ನೋಟು ನಿಷೇಧದ ಯೋಜನೆಯನ್ನು ಕಾರ್ಯಗತಗೊಳಿಸಲು ಹಸ್ ಮುಖ್ ಅಧಿಯಾ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ್ದು ಕೇವಲ 5 ಯುವಕರ ಸಂಶೋಧಕರ ತಂಡ, ಯೋಜನೆಯ ಗೌಪ್ಯತೆಯನ್ನು ಎಷ್ಟರ ಮಟ್ಟಿಗೆ ಕಾಯ್ದುಕೊಳ್ಳಲಾಗಿತ್ತೆಂದರೆ ಈ 6 ಜನರ ಸಂಶೋಧಕರ ತಂಡ ಪ್ರಧಾನಿ ಮೋದಿ ಅವರ ನಿವಾಸದ ಎರಡು ಕೊಠಡಿಗಳಿಂದಲೇ ಕೆಲಸ ಮಾಡುತ್ತಿತ್ತು. ಮತ್ತು ನೋಟು ನಿಷೇಧದ ನಿರ್ಧಾರವನ್ನು ಘೋಷಣೆ ಮಾಡುತ್ತಿದ್ದಂತೆಯೇ ಕಪ್ಪುಹಣ ಹೊಂದಿರುವವರು ಅದನ್ನು ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡಲಿದ್ದಾರೆ ಎಂದು ಹಸ್ ಮುಖ್ ಅಧಿಯಾ ನೇತೃತ್ವದ ತಂಡ ಊಹೆ ಮಾಡಿದಿದ್ದು ಯೋಜನೆ ಜಾರಿಗೆ ತೆರೆ ಮರೆಯಲ್ಲಿ ಕೆಲಸ ಮಾಡಿದ್ದವರ ದೂರದೃಷ್ಟಿಗೆ ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ.   
ಯೋಜನೆಯ ಜಾರಿಯಲ್ಲಿ ಸ್ವಲ್ಪ ಲೋಪಗಳು ನಡೆದಿದ್ದರೂ ಅನಾಹುತ ನಡೆಯುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿಯಾಗಬಹುದಾದ ನಿರ್ಧಾರವನ್ನು ತೆಗೆದುಕೊಂಡಿದ್ದ ಮೋದಿ, ಹಸ್ ಮುಖ್ ಅಧಿಯಾ ನೇತೃತ್ವದ ತಂಡದ ಮೇಲೆ ನಂಬಿಕೆ ಇಟ್ಟು ತಮ್ಮ ಜನಪ್ರಿಯತೆ ಹಾಗೂ ಗೌರವಗಳನ್ನು ಪಣಕ್ಕಿಟ್ಟು ನೋಟು ನಿಷೇಧದ ನಿರ್ಧಾರವನ್ನು ಅಂತಿಮಗೊಳಿಸುತ್ತಾರೆ. ಇದೇ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟದಲ್ಲೂ ಪ್ರಕಟಿಸಿದ್ದ ಪ್ರಧಾನಿ ಮೋದಿ, ನಾನು ಸಾಕಷ್ಟು ಸಂಶೋಧನೆ ನಡೆಸಿದ್ದೇನೆ, ಒಂದು ವೇಳೆ ಅದು ವಿಫಲಗೊಂಡರೆ ದೂಷಣೆಗೆ ಹೊಣೆಗಾರನಾಗುತ್ತೇನೆ ಎಂದು ಹೇಳಿದ್ದರಂತೆ. 
ಒಂದು ಮೂಲಗಳ ಪ್ರಕಾರ, ಹೊಸ ಸರಣಿಯ ನೋಟುಗಳಿಗೆ ಸಿದ್ಧತೆ ನಡೆಸಲಾಗುತ್ತಿರುವುದರ ಬಗೆಗಿನ ಮಾಹಿತಿಯನ್ನು ಮೇ ತಿಂಗಳಲ್ಲಿ ಆರ್ ಬಿಐ ಬಹಿರಂಗಪಡಿಸಿದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸಂಬಂಧಿಸಿದ ವಿಶ್ಲೇಷಕರಿಗೆ ನೋಟು ನಿಷೇಧದಂತಹ ಕ್ರಮ ಜಾರಿಯಾಗುವ ಸಾಧ್ಯತೆ ಬಗ್ಗೆ ಸಣ್ಣ ಸುಳಿವು ಇತ್ತೆಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ 2,000 ರೂ ನೋಟು ವಿನ್ಯಾಸಕ್ಕೆ ಆರ್ ಬಿಐ ಅನುಮೋದನೆ ನೀಡಿದ ಬಳಿಕ ನೋಟು ನಿಷೇಧದ ಸಾಧ್ಯತೆಗಳು ಮತ್ತಷ್ಟು ನಿಚ್ಚಳವಾಗಿತ್ತು. ಆದರೆ 2,000 ರೂ ನೋಟುಗಳು ಮುದ್ರಣಗೊಳ್ಳುವರೆಗೆ ಮಾಧ್ಯಮಗಳಿಗೆ ಈ ವಿಷಯಗಳ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. 
ರಾಯಟರ್ಸ್ ಪ್ರಕಟಿಸಿರುವ ವರದಿಯ ಪ್ರಕಾರ ನೋಟು ನಿಷೇಧದ ನಿರ್ಧಾರವನ್ನು ನ.18 ರಂದು ಘೋಷಿಸಲು ಉದ್ದೇಶಿಸಲಾಗಿತ್ತು. ಆದರೆ ಮಾಹಿತಿ ಸೋರಿಕೆಯಾಗುವ ಅಪಾಯವಿದ್ದ ಕಾರಣ ನ.8 ರಂದೇ ಘೋಷಿಸಲಾಯಿತೆಂಬ ಮಾಹಿತಿ ಬಹಿರಂಗವಾಗಿದೆ. ನೋಟು ನಿಷೇಧದ ಪ್ರಸ್ತಾವನೆ ಎದುರಾದಾಗ ಹಣಕಾಸು ಸಚಿವಾಲಯದ ಕೆಲವು ಅಧಿಕಾರಿಗಳು ಈ ಕ್ರಮ ಯಶಸ್ವಿಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ ಹಸ್ ಮುಖ್ ಅಧಿಯಾ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಂತೆಯೇ ಕಾರ್ಯನಿರ್ವಹಿಸಿದ್ದಾರೆ.  
ಕಾರ್ಯಾಚರಣೆಗೆ ಇಳಿದ ಅಧಿಯಾ ಟೀಂ, ಹೊರಗಿನ ಸಲಹೆಗಳಿಗೆ ಹೆಚ್ಚು ಗಮನ ನೀಡದೇ, ಪ್ರಧಾನಿ ಮೋದಿ ಅವರ ಯೋಜನೆಯನ್ನು ಜಾರಿಗೊಳಿಸುವತ್ತ ಮಾತ್ರ ಗಮನ ಕೇಂದ್ರೀಕರಿಸಿತ್ತು. ನರೇಂದ್ರ ಮೋದಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ 2003-2006 ರ ವರೆಗೆ  ಹಸ್ ಮುಖ್ ಅಧಿಯಾ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2015 ರಲ್ಲಿ ಅಧಿಯಾ ಅವರನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು, ಆಗಿನಿಂದ ಪ್ರಧಾನಿ ಮೋದಿ ಅವರೊಂದಿಗೆ ಅಧಿಯಾ ನೇರ ಸಂಪರ್ಕದಲ್ಲಿದ್ದರು ಎಂದು ರಾಯಟರ್ಸ್ ವರದಿ ಮೂಲಕ ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com