'ವೋಟಿಗಾಗಿ ನೋಟು' ಪ್ರಕರಣದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ರಿಲೀಫ್

'ವೋಟಿಗಾಗಿ ನೋಟು' ಪ್ರಕರಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದ ಬಗ್ಗೆ ತನಿಖೆ ನಡೆಸುವಂತೆ...
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
ಹೈದರಾಬಾದ್: 'ವೋಟಿಗಾಗಿ ನೋಟು' ಪ್ರಕರಣದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ವಿಶೇಷ ಕೋರ್ಟ್ ತೆಲಂಗಾಣ ಎಸಿಬಿಗೆ ನೀಡಿದ್ದ ಆದೇಶಕ್ಕೆ ಶುಕ್ರವಾರ ಹೈದರಾಬಾದ್ ಹೈಕೋರ್ಟ್ ತಡೆ ನೀಡಿದ್ದು, ಆಂಧ್ರ ಸಿಎಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಎಸಿಬಿ ನಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಸುನಿಲ್ ಚೌಧರಿ ನೇತೃತ್ವದ ಏಕ ಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಶಾಸಕ ಅಲ್ಲ ರಾಮಕೃಷ್ಣ ರೆಡ್ಡಿ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಎಸಿಬಿ ಕೋರ್ಟ್ 'ವೋಟಿಗಾಗಿ ನೋಟು' ಪ್ರಕರಣದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ತೆಲಂಗಾಣ ಎಸಿಬಿಗೆ ಆದೇಶಿಸಿತ್ತು.
ಇನ್ನು ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವೈಎಸ್ ಆರ್ ಕಾಂಗ್ರೆಸ್ ಶಾಸಕ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ವೋಟಿಗಾಗಿ ನೋಟು ಹಗರಣದಲ್ಲಿ ಸಿಲುಕಿಕೊಂಡಿದ್ದು, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಒಡೆತನದ ಸ್ಥಳೀಯ ಸುದ್ದಿವಾಹಿನಿಯೊಂದು ನಾಯ್ಡು, ವೋಟಿಗಾಗಿ ನೋಟು ಹಗರಣದಲ್ಲಿ ಪಾತ್ರ ವಹಿಸಿರುವ ಕುರಿತು ಆಡಿಯೋ ಟೇಪ್' ಒಂದನ್ನ ಪ್ರಸಾರ ಮಾಡಿತ್ತು. ಆಂಗ್ಲೋ ಇಂಡಿಯನ್ ಸದಸ್ಯರಿಗೆ ಲಂಚದ ಆಮಿಶವೊಡ್ಡುತ್ತಿದ್ದಾಗ ಬಂಧನಕ್ಕೀಡಾದ ಟಿಡಿಪಿ ಎಂಎಲ್'ಎ ರೇಂವತ್ ರೆಡ್ಡಿ ಜೊತೆ ನಾಯ್ಡು ನಡೆಸಿರುವ ದೂರವಾಣಿ ಸಂಭಾಷಣೆ ಇದರಲ್ಲಿದೆ. ಆದರೆ, ಅದರಲ್ಲಿರುವ ಆಡಿಯೋ ನನ್ನದಲ್ಲ ಎಂದಿರುವ ಚಂದ್ರಬಾಬುನಾಯ್ಡು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com