ಹೈದರಾಬಾದ್: 2013 ರ ಫೆಬ್ರವರಿ 21 ರಂದು ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಹೈದರಾಬಾದ್ ನ ಎನ್ಐಎ ವಿಶೇಷ ನ್ಯಾಯಾಲಯ ಡಿ.13 ರಂದು ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ 5 ಜನರನ್ನು ಅಪರಾಧಿಗಳೆಂದು ಘೋಶಿಸಿದೆ.
ಅಸಾದುಲ್ಲಾ ಅಖ್ತರ್, ಯಾಸಿನ್ ಭಟ್ಕಳ್, ನಬೀಲ್ ಅಹ್ಮದ್, ತಾಹ್ ಸೇನ್ ಅಖ್ತರ್(ಮೋನು) ಅಜೀಜ್ ಸಯೀದ್, ಆಜಾಜ್ ಶೇಖ್ ಅಪರಾಧಿಗಳೆಂದು ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು 2014 ರ ಸೆ.5 ರಂದು ಬಂಧಿಸಲಾಗಿತ್ತು. 2013 ರ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 19 ಜನರು ಮೃತಪಟ್ಟಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 307, 324, 326, 124 A, 153 ಎ, 120 ಬಿ ಸ್ಫೋಟಕಗಳ ವಸ್ತುಗಳ ಕಾಯ್ದೆಯ ಸೆಕ್ಷನ್ 16, 18 ಹಾಗೂ 20 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಅಪರಾಧಿಗಳಿಗೆ ಡಿ.19 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.