ನವದೆಹಲಿ: ಮುಂದಿನ ಸೇನಾ ಮುಖ್ಯಸ್ಥರ ಹೆಸರನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಅವರು ಇಂದು ದೆಹಲಿಯ ಅಮರ ಜ್ಯೋತಿಯಲ್ಲಿ, ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರೊಡಗೂಡಿ 1971ರ ಭಾರತ-ಪಾಕ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಭಾರತ ಮತ್ತು ಪಾಕಿಸ್ತಾನ ನಡುವೆ 1971ರಲ್ಲಿ ಯುದ್ಧ ನಡೆದು ಅದರಲ್ಲಿ ಭಾರತ ಜಯಶಾಲಿಯಾಗಿ ಇಂದಿಗೆ 45 ವರ್ಷ. ಇದರ ಅಂಗವಾಗಿ ನಮ್ಮ ದೇಶದ ಮೂರೂ ಸೇನಾಪಡೆ ವಿಜಯ ದಿವಸ ಆಚರಿಸುತ್ತದೆ.
1971ರ ಈ ದಿನ ನಾವು ನಿರ್ಣಾಯಕ ಗೆಲುವು ಸಾಧಿಸಿದ ದಿನ.ಭಾರತದ ಮಿಲಿಟರಿ ಇತಿಹಾಸದಲ್ಲಿ ಮಹತ್ವದ ಗೆಲುವು ಸಾಧಿಸಿದ ದಿನ ಇಂದಾಗಿದೆ. ಹಾಗಾಗಿ ವಿಜಯ ದಿವಸವನ್ನು ಆಚರಿಸುವುದು ಹೆಮ್ಮೆಯ ವಿಷಯ ಎಂದು ಪರಿಕ್ಕರ್ ಹೇಳಿದರು.
1971ರ ಈ ದಿನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ತಮ್ಮ 93,000 ಪಡೆಗಳೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಜಗಜಿತ್ ಸಿಂಗ್ ಔರೊರಾ ಮತ್ತು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಮುಕ್ತಿ ಬಹಿನಿ ಅವರ ಮುಂದೆ ಢಾಕಾದಲ್ಲಿ ಷರತ್ತುರಹಿತವಾಗಿ ಯುದ್ಧದಲ್ಲಿ ಸೋತು ಶರಣಾಗಿದ್ದರು.
ಯುದ್ಧದ ಅಂತ್ಯದಲ್ಲಿ ಪೂರ್ವ ಪಾಕಿಸ್ತಾನದ ಸ್ವಲ್ಪ ಪ್ರಾಂತ್ಯ ಬಾಂಗ್ಲಾದ ಪಾಲಾಯಿತು.
ಈ ದಿವಸದ ಸಂಭ್ರಮವನ್ನು ಆಚರಿಸಲು ಪೂರ್ವ ಕಮಾಂಡ್ ಕೇಂದ್ರ ಕಚೇರಿಯಾದ ಕೊಲ್ಕತ್ತಾದ ಫೋರ್ಟ್ ವಿಲಿಯಮ್ ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಬಾಂಗ್ಲಾದೇಶ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.