
ಚೆನ್ನೈ: ತಮಿಳುನಾಡಿನ ಮಸೀದಿ ಆವರಣಗಳಲ್ಲಿರುವ ಅನಧಿಕೃತ ಶರಿಯಾ ಕೋರ್ಟ್ ಗಳಿಗೆ ನಿಷೇಧ ಹೇರಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ಧಾರ್ಮಿಕ ಪ್ರದೇಶಗಳಲ್ಲಿರುವ ಮಸೀದಿಗಳು ಕೇವಲ ಧರ್ಮಕ್ಕೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ತಮ್ಮ ಮಿತಿಯನ್ನು ವಿಸ್ತರಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಎಂ. ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಶರಿಯಾ ಕೋರ್ಟ್ ಗಳಿಗೆ ನಿಷೇಧ ಹೇರಿದೆ. ಜೊತೆಗೆ ಅವು ಕಾರ್ಯ ನಿರ್ವಹಿಸದಂತೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ನಾಲ್ಕು ವಾರಗಳಲ್ಲಿ ಅವುಗಳ ಸ್ಥಿತಿಗಳ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಚೆನ್ನೈನ ಮಸೀದಿ ಆವರಣದಲ್ಲಿರುವ ಶರಿಯಾ ಕೋರ್ಟ್ ರೆಗ್ಯೂಲರ್ ಕೋರ್ಟ್ ನಂತೆ ಕಾರ್ಯ ನಿರ್ವಹಿಸುತ್ತಿವೆ. ವೈವಾಹಿಕ ವಿವಾದಗಳನ್ನು ಬಗೆಹರಿಸಲು ಮುಂದಾಗಿರುವ ಶರಿಯಾ ಕೋರ್ಟ್ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರಿಗೆ ಸಮನ್ಸ್ ಜಾರಿ ಮಾಡುತ್ತಿದೆ ಎಂದು ಎನ್ ಆರ್ ಐ ಅಬ್ದುಲ್ ರೆಹಮಾನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಶರಿಯಾ ಕೋರ್ಟ್ ನಿರ್ಧಾರದಿಂದಾಗಿ ಮುಗ್ಧರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಜೊತೆಗೆ ಈ ಕೋರ್ಟ್ ಶರಿಯಾ ಕಾನೂನಿನ ಅನ್ವಯ ತೀರ್ಪು ನೀಡುತ್ತಿರುವುದಿರಂದ ನೂರಾರು ಮುಸ್ಲಿಂ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ ಎಂದು ಹೇಳಲಾಗಿತ್ತು. ವ್ಯಕ್ತಿಯೊಬ್ಬ ತನ್ನ ಹೆಂಡತಿ ಜೊತೆ ಮತ್ತೆ ಸಂಸಾರ ನಡೆಸಬೇಕು ಎಂದು ಬಯಸಿದರು ಶರಿಯಾ ಕೋರ್ಟ್ ಗಳು ಬಲವಂತವಾಗಿ ಆತನಿಂದ ತಲಾಖ್ ಹೇಳಿಸಿ ದಂಪತಿ ಒಂದಾಗಲು ಬಿಡುತ್ತಿಲ್ಲ ಎಂದು ಆರೋಪಿಸಲಾಗಿತ್ತು.
Advertisement