ಮೋದಿ ಸಹರಾ ಕಂಪೆನಿಯಿಂದ 40 ಕೋಟಿ ರು. ಕಿಕ್ ಬ್ಯಾಕ್ ಪಡೆದಿದ್ದಾರೆ: ರಾಹುಲ್‌ ಗಾಂಧಿ

ಇತ್ತೀಚಿಗಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಅಹಮದಾಬಾದ್‌: ಇತ್ತೀಚಿಗಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು, ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಹರಾ ಕಂಪನಿಯಿಂದ 40 ಕೋಟಿ ರುಪಾಯಿ ಪಡೆದಿದ್ದಾರೆ ಎಂದು ಬುಧುವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಗುಜರಾತ್ ನ ಮೆಹ್ಸನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಮೋದಿ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಕಂಪನಿಯಿಂದ ಕೋಟ್ಯಂತರ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದು, ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸಹರಾ ಕಂಪೆನಿಯ ಕಚೇರಿಯ ಮೇಲೆ 2014ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಮೋದಿ ಅವರಿಗೆ ಹಣ ನೀಡಿರುವ ದಾಖಲೆಗಳೂ ಪತ್ತೆಯಾಗಿವೆ. 2013ರ ಅಕ್ಟೋಬರ್‌ನಿಂದ 2014ರ ಫೆಬ್ರುವರಿವರೆಗೆ ಸಹರಾ ಕಂಪೆನಿಯಿಂದ ಮೋದಿ ಅವರು 40 ಕೋಟಿ ರುಪಾಯಿ ಪಡೆದಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ.
ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹರಾ ಕಂಪನಿಯಿಂದ ಆರು ತಿಂಗಳಲ್ಲಿ 9 ಬಾರಿ ಹಣ ಸಂದಾಯ ಮಾಡಲಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆಯ ದಾಖಲೆಗಳ ಪ್ರಕಾರ, 2013ರ ಅಕ್ಟೋಬರ್ 30ರಂದು ಮೋದಿಜೀಗೆ 2.5 ಕೋಟಿ, ನ.12ರಂದು  5 ಕೋಟಿ ರೂಪಾಯಿ, ನವೆಂಬರ್ 27ರಂದು 2.5 ಕೋಟಿ , ನವೆಂಬರ್ 29ಕ್ಕೆ 5 ಕೋಟಿ ರೂಪಾಯಿ ಹಣ ಸಂದಾಯವಾಗಿರುವುದಾಗಿ ಗುಜರಾತ್ ನ ಮೆಹನ್ಸಾದಲ್ಲಿ ನಡೆದ ರಾಲಿಯಲ್ಲಿ ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ನಾನು ಮಾತನಾಡಲು ನೀವು (ಮೋದಿ) ಬಿಡಲಿಲ್ಲ. ನೀವು ನನ್ನ ಎದುರು ನಿಲ್ಲುವುದಿಲ್ಲ. ಅದು ಏಕೆಂದು ನನಗೆ ಗೊತ್ತು. ಶ್ರೀಮಂತರ ಸಾಲದ ಬಗ್ಗೆ ಮೃದುವಾಗಿರುವ ನೀವು (ಮೋದಿ) ಬಡವರು ಸಾಲ ತೀರಿಸದಿದ್ದರೆ ಜೈಲಿಗೆ ಹಾಕುತ್ತೀರಿ ಎಂದು ರಾಹುಲ್‌ ಕಿಡಿಕಾರಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಝಫರ್ ಇಸ್ಲಾಂ, ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ತನ್ನ ಬಳಿ ದಾಖಲೆ ಇದೆ ಎಂದು ರಾಹುಲ್ ಹೇಳಿದ್ದರು. ಆದರೆ ದಾಖಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com