ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಅಳವಡಿಕೆಗೆ ಮಾನವ ಸಂಪನ್ಮೂಲ ಇಲಾಖೆ ಸೂಚನೆ

ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಂಬಂಧಿತ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಂಬಂಧಿತ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಅಳವಡಿಸಲು ಶಿಫಾರಸು ಮಾಡಿದೆ. ಈ ಮೂಲಕ ಶೈಕ್ಷಣಿಕ ಗುಣಮಟ್ಟದಲ್ಲಿ ಹಿಂದಿರುವ ರಾಜ್ಯಗಳನ್ನು ಮುಂದೆ ತರುವುದು ಇಲಾಖೆಯ ಉದ್ದೇಶವಾಗಿದೆ.
ಸಮಿತಿ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಮಾತುಕತೆ ನಡೆಸಿ ಸಂಸತ್ತಿಗೆ ಮೊನ್ನೆ 15ರಂದು ವರದಿ ಸಲ್ಲಿಸಿದ್ದು, ಶಿಕ್ಷಣ ನೀಡಿಕೆಯಲ್ಲಿ ಮತ್ತು ಕಲಿಕೆಯಲ್ಲಿ ದೇಶ ಮತ್ತು ರಾಜ್ಯಗಳ ನಡುವೆ ಇರುವ ಭಿನ್ನತೆಯನ್ನು ಹೋಗಲಾಡಿಸಲು ವರದಿಯಲ್ಲಿ ಒತ್ತು ನೀಡಲಾಗಿದೆ.  ಕೆಲವು ರಾಜ್ಯಗಳಲ್ಲಿ ಮಕ್ಕಳನ್ನು ಶಾಲೆಗೆ ಪ್ರವೇಶ ಮಾಡುವ ವಯಸ್ಸು 6 ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ 5 ವರ್ಷವಾಗಿದೆ ಎಂದು ಅದು ಹೇಳಿದೆ.
ಸರ್ವ ಶಿಕ್ಷ ಅಭಿಯಾನದಡಿ ಅನೇಕ ಶಿಕ್ಷಕ ಹುದ್ದೆಗಳು ಖಾಲಿ ಉಳಿದಿವೆ ಎಂಬ ಅಂಶವನ್ನು ಕೂಡ ಸಮಿತಿ ಹೇಳಿದೆ. ಹೀಗೆ ಶಿಕ್ಷಕರ ಕೊರತೆಯಿಂದ ಸರ್ವ ಶಿಕ್ಷ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅದು ಹೇಳಿದೆ.
ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಅಳವಡಿಸುವ ಯೋಜನೆಗೆ ವರದಿಯಲ್ಲಿ ಸಮಿತಿ ವಿಶೇಷ ಒತ್ತು ನೀಡಿದೆ. ಶಿಕ್ಷಕರು ಕಲಿಸುವುದು, ಮಕ್ಕಳು ಕಲಿಯುವುದು, ಕಂಪ್ಯೂಟರ್ ತಂತ್ರಜ್ಞಾನವನ್ನು ಮಕ್ಕಳು ರೂಢಿಸಿಕೊಳ್ಳುವುದು, ಮಲ್ಟಿ ಮೀಡಿಯಾ ಪ್ರಾಜೆಕ್ಟ್ ಮತ್ತು ಸ್ಮಾರ್ಟ್ ಬೋರ್ಡ್ ಗಳ ಬಳಕೆ, ದೃಶ್ಯಗಳ ಮೂಲಕ ಮಕ್ಕಳಿಗೆ ಪಾಠಗಳನ್ನು ಕಲಿಸಿದರೆ ಹೆಚ್ಚು ಅರ್ಥವಾಗುತ್ತದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಪೂರೈಸಬೇಕೆಂಬ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯಗಳು ಸರಿಯಾಗಿ ಅನುಸರಿಸುವುದಿಲ್ಲ, ಇದರಿಂದ ಆಹಾರ ಧಾನ್ಯಗಳು ಸೋರಿಕೆಯಾಗುತ್ತವೆ, ಫಲಾನುಭವಿ ಮಕ್ಕಳಿಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪರಾಮರ್ಶಿಸಿ ಅದರ ಸರಿಯಾದ ಜಾರಿಗೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕಿದೆ ಎಂದು ಕೂಡ ಸಮಿತಿ ನೀಡಿರುವ ವರದಿಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com