ನವದೆಹಲಿ: ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ದೇಶದ 33,000 ಸರ್ಕಾರೇತರ ಸಂಸ್ಥೆಗಳ(ಎನ್ಜಿಒ) ಪೈಕಿ 20,000 ಎನ್ಜಿಒ ಗಳ ವಿದೇಶೀ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್ಎ) ಪರವಾನಿಗಗಳನ್ನು ಸರ್ಕಾರ ಮಂಗಳವಾರ ರದ್ದು ಪಡಿಸಿದೆ.
ದೇಶದಲ್ಲಿ ಪ್ರಸ್ತೂತ 13,000 ಎನ್ಜಿಒಗಳು ಮಾತ್ರ ಕಾನೂನು ಬದ್ಧವಾಗಿದ್ದು, ಅಸಮರ್ಪಕ ದಾಖಲಾತಿಗಳಿಗಾಗಿ 20,000 ಎನ್ಜಿಒಗಳ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಟೆ ಸಾಮಾಜಿಕ ಕಾರ್ಯಕರ್ತೆ ಶಬನಮ್ ಹಶ್ಮಿ ನಡೆಸುವ ಎನ್ಜಿ ಒ ಸೇರಿದಂತೆ 7 ಎನ್ಜಿಒಗಳನ್ನು ವಿದೇಶೀ ಹಣ ಸ್ವೀಕರಿಸದಂತೆ ಸರ್ಕಾರ ನಿಷೇಧಿಸಿತ್ತು. ಬಳಿಕ ಗುಪ್ತಚರ ದಳದ ಪ್ರತಿಕೂಲ ವರದಿಗಳನ್ನು ಆಧರಿಸಿ ಅವುಗಳ ಎಫ್ಸಿಆರ್ಎ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ. ಇತ್ತೀಚೆಗೆ ಎಫ್ಸಿಆರ್ಎ ಪರವಾನಗಿಗಳನ್ನು ನವೀಕರಿಸಿದ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ತನಿಖೆ ನಡೆಸಿದ ಬಳಿಕ ಗೃಹ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.
ವಿದೇಶೀ ನಿಧಿ ಬಳಸಿ ಸರ್ಕಾರವನ್ನು ‘ದಲಿತ ವಿರೋಧಿ’ ಎಂಬುದಾಗಿ ವಿದೇಶಗಳಲ್ಲಿ ಪ್ರಚುರ ಪಡಿಸುವುದು ಹಾಗೂ ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ಕೆಲಸಗಳನ್ನು 7 ಎನ್ಜಿಒಗಳು ನಡೆಸುತ್ತಿವೆ ಎಂದು ಗುಪ್ತಚರ ವರದಿಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿದ್ದ ಗೃಹ ಇಲಾಖೆ ಎನ್ಜಿಒಗಳ ವಿಚಾರದಲ್ಲಿ ಇನ್ನಷ್ಟು ತನಿಖೆ ಕೈಗೊಂಡಿತ್ತು.
ಡಿಸೆಂಬರ್ 14ರಂದು ಸರ್ಕಾರ ತೀಸ್ತಾ ಸೆಟಲ್ವಾಡ್ ನಡೆಸುತ್ತಿದ್ದ ಸಬ್ರಂಗ್ ಟ್ರಸ್ಟ್ ಮತ್ತು ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಹೆಸರಿನ ಎನ್ಜಿಒ ಹಾಗೂ ಗ್ರೀನ್ ಪೀಸ್ ಇಂಡಿಯಾ ಎನ್ಜಿಒಗಳ ಎಫ್ಸಿಆರ್ಎ ಲೈಸೆನ್ಸ್ ನವೀಕರಣವನ್ನು ರದ್ದು ಪಡಿಸಿತ್ತು.