ಗೋವಾ: ರನ್ ವೇಯಲ್ಲಿ ಜಾರಿದ ಜೆಟ್ ಏರ್ ವೇಸ್ ವಿಮಾನ, 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ಗೋವಾದಿಂದ ಮುಂಬೈಗೆ ಹೊರಟಿದ್ದ 9 ಡಬ್ಲ್ಯು 2374 ಜೆಟ್...
ರನ್ ವೇಯಲ್ಲಿ ಜಾರಿದ ವಿಮಾನ, ಬಲಚಿತ್ರದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ರನ್ ವೇಯಲ್ಲಿ ಜಾರಿದ ವಿಮಾನ, ಬಲಚಿತ್ರದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ಪಣಜಿ:  ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ಗೋವಾದಿಂದ ಮುಂಬೈಗೆ ಹೊರಟಿದ್ದ 9 ಡಬ್ಲ್ಯು 2374 ಜೆಟ್ ಏರ್ ವೇಸ್ ವಿಮಾನ ರನ್ ವೇಯಲ್ಲಿ ಹಠಾತ್ತನೆ ಜಾರಿದ ಘಟನೆ ಇಂದು ಬೆಳಗಿನ ಜಾವ 4.45ರ ಸುಮಾರಿಗೆ ನಡೆದಿದೆ. 
ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ವಿಮಾನದಲ್ಲಿ ಏಳು ಮಂದಿ ಸಿಬ್ಬಂದಿ ಹಾಗೂ 151 ಮಂದಿ ಪ್ರಯಾಣಿಕರು ಇದ್ದರು.ವಿಮಾನದಿಂದ ಕೆಳಗಿಳಿಸುವಾಗ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಉಳಿದವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.
ವಿಮಾನಕ್ಕೆ ಕೂಡ ಸಣ್ಣ  ಪ್ರಮಾಣದಲ್ಲಿ ಹಾನಿಯಾಗಿದೆ. ಗಾಯಗೊಂಡ 15 ಮಂದಿ ಪ್ರಯಾಣಿಕರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ 360 ಡಿಗ್ರಿಯಲ್ಲಿ  ರನ್ ವೇಯಲ್ಲಿ ಜಾರಿತು. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ.
ಕ್ಷಿಪ್ರ ಪ್ರಿತಿಕ್ರಿಯೆಯಿಂದಾಗಿ ಮಹಾ ದುರಂತವನ್ನು ತಪ್ಪಿಸಲಾಯಿತು ಎಂದು ನೌಕಾಪಡೆ ತಿಳಿಸಿದೆ.

ಪ್ರಯಾಣಿಕರನ್ನು ಹೊರತೆಗೆಯುವಾಗ ಹಠಾತ್ತನೆ ವಿಮಾನ ಮುಂದಕ್ಕೆ ಬಾಗಿತು. ಇದರಿಂದ ಪ್ರಯಾಣಿಕರಲ್ಲಿ ಆತಂಕ, ಭಯ ಉಂಟಾಗಿತ್ತು. ಜೆಟ್ ಏರ್ ವೇಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ಒಟ್ಟು ಸೇರಿ ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯುವಲ್ಲಿ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.

ದುಬೈಯಿಂದ ಬಂದ 9 ಡಬ್ಲ್ಯು 2374 ವಿಮಾನ ಮುಂಬೈಗೆ ಹೊರಟು ರನ್ ವೇಯಲ್ಲಿ ಹೋಗುತ್ತಿದ್ದಾಗ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ದುರಂತ ನಡೆದಿದೆ. 
ಐಎನ್ಎಸ್ ಹಂಸ ವಾಸ್ಕೊ ಪಟ್ಟಣದಲ್ಲಿದ್ದು ಇದು ಇರುವುದು ಗೋವಾದಿಂದ 25 ಕಿಲೋ ಮೀಟರ್ ದೂರದಲ್ಲಿ. 

ರಕ್ಷಣಾ ಕಾರ್ಯದ ಹೊತ್ತಿನಲ್ಲಿ ಗೋವಾ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನವನ್ನು  ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತು ಒಮನ್ ಏರ್ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಏಳು ವಿಮಾನಗಳನ್ನು ರದ್ದುಪಡಿಸಲಾಯಿತು. ಮತ್ತೆರಡು ವಿಮಾನಗಳು ನಿಗದಿತ ವೇಳೆಗೆ ಹಾರಾಟ ನಡೆಸಲಿಲ್ಲ. 
 
ಪ್ರಯಾಣಿಕರಿಗೆ ಅನನುಕೂಲವಾಗದಂತೆ ಬದಲಿ ವಿಮಾನದ ವ್ಯವಸ್ಥೆಯನ್ನು  ಮಾಡಲಾಗುವುದು. ವಿಮಾನ ನಿಲ್ದಾಣ  ಕೂಡಲೇ ಸಹಜ ಸ್ಥಿತಿಗೆ ಬರಲು  ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯ ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ. 

ವಿಮಾನ ಅಪಘಾತ ತನಿಖಾ ವಿಭಾಗ ಜೆಟ್ ಏರ್ ವೇಸ್ ಅಪಘಾತದ ತನಿಖೆ ನಡೆಸಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ತಪಾಸಣೆ ಕೈಗೊಂಡಿದೆ. ಹಂಸಾ ರನ್ ವೇಯಲ್ಲಿ ವಿಮಾನ ಟೇಕ್ ಆಫ್ ಆಗುವಾಗ ಜಾರಿದ್ದು ಬೆಳಗ್ಗೆ 9 ಗಂಟೆ ವೇಳೆಗೆ ಸಂಚಾರಕ್ಕೆ ಬಳಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com