12 ತಾಸು ಕೆಲಸ ಮಾಡಲು ನಾವು ಗುಲಾಮರಲ್ಲ: ನೋಟು ಮುದ್ರಣ ನೌಕರರ ಅಸಮಾಧಾನ

ಪ್ರತಿದಿನ 9 ಗಂಟೆಗಳಿಗೂ ಹೆಚ್ಚಿನ ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ನೋಟು ಮುದ್ರಣ ಕೇಂದ್ರದ ನೌಕರರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕೋತಾ: ಪ್ರತಿದಿನ 9 ಗಂಟೆಗಳಿಗೂ ಹೆಚ್ಚಿನ ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ನೋಟು ಮುದ್ರಣ ಕೇಂದ್ರದ ನೌಕರರು ತಿಳಿಸಿದ್ದಾರೆ. 12 ಗಂಟೆಗಳ ಕಾಲ ಕೆಲಸ ಮಾಡಲು ನಾವು ಗುಲಾಮರಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ 14ರಿಂದ ನಿರಂತರವಾಗಿ ಹೆಚ್ಚಿನ ಅವಧಿಗೆ ಕೆಲಸ ಮಾಡಿದ ಕಾರಣ ಕೆಲವು ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ (ಬಿಆರ್‌ಬಿಎನ್‌ಎಂಪಿಎಲ್) ನೌಕರರ ಸಂಘವು ಅಧಿಕಾರಿಗಳಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ಸಲ್ಬೋನಿ ಮುದ್ರಣ ಕೇಂದ್ರದ ಹಲವು ನೌಕರರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಹೊಸ ನೋಟುಗಳಿಗೆ ಎದುರಾದ ಭಾರಿ ಬೇಡಿಕೆ ಪೂರೈಸಲು ಪ್ರತಿದಿನ 12 ತಾಸು ಕೆಲಸ ಮಾಡಲು ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರಿದ್ದರು ಪ್ರಯೋಜನಕ್ಕೆ ಬರಲಿಲ್ಲ. 12 ತಾಸು ಕೆಲಸ ಮಾಡಲು ನೌಕರರೇನೂ ಗುಲಾಮರಲ್ಲ ಎಂದು ಅವರು ಆಕ್ರೋಶದಿಂದ ಹೇಳಿದರು. ಸಲ್ಬೋನಿ ಮುದ್ರಣಾಲಯದಲ್ಲಿ ಪ್ರತಿದಿನ ಅಂದಾಜು 9.6 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತಿದೆ.

12 ಗಂಟೆಗಳ ಪಾಳಿ ಬದಲು 9 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಿದರೆ ದಿನಕ್ಕೆ ಒಟ್ಟು 6.8 ಕೋಟಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗುತ್ತದೆ  ನೋಟುಗಳ ಕೊರತೆಯಿಂದಾಗಿ ಜನತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, 'ಸಮಸ್ಯೆ ಆಗುತ್ತದೆ ಎಂಬುದು ನಮಗೆ ಗೊತ್ತಿದೆ. ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು. ನೋಟು ರದ್ದು ಮಾಡುವ ತೀರ್ಮಾನ ಕೈಗೊಂಡಿದ್ದು ಸರ್ಕಾರವಲ್ಲವೇ?' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನದಲ್ಲಿ 12 ಗಂಟೆ ದುಡಿಯಲು ನಾವು ಗುಲಾಮರಲ್ಲ, ಅಥವಾ ರೋಬೋಟ್ ಗಳಲ್ಲ, 12 ಗಂಟೆ ಕೆಲಸ ಮಾಡುವುದು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು, ಆದರೆ ನಾವು ಮನುಷ್ಯರು, ನಮಗೂ ವಿಶ್ರಾಂತಿ ಬೇಕು, ನಮ್ಮ ಕುಟುಂಬಕ್ಕೂ ಕೆಲ ಸಮಯ ನೀಡುವ ಅವಶ್ಯಕತೆ ಇದೆ ಎಂದು ನೋಟು ಮುದ್ರಣ ನೌಕರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com