ಲಕ್ನೋ: ಸಮಾಜವಾದಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಮತ್ತು ಅವರ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರ ಉಚ್ಚಾಟನೆ ಯನ್ನು ರದ್ದುಗೊಳಿಸಲಾಗಿದೆ.
ಈ ನಿರ್ಧಾರ ತೆಗೆದುಕೊಂಡ 24 ಗಂಟೆಗಳೊಳಗೆ ಮುಲಾಯಂ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಅಖಿಲೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವಂತೆ ಕೆಲವು ನಾಯಕರು ಒತ್ತಾಯಿಸಿದ್ದರು.
ಶನಿವಾರ ಬೆಳಗ್ಗೆ ಅಖಿಲೇಶ್ ಯಾದವ್ ಕಾಳಿದಾಸ್ ಮಾರ್ಗ್ ನಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಭೆ ಕರೆದಿದ್ದರು. ಎಸ್ ಪಿ ಒಟ್ಟು 229 ಶಾಸಕರಲ್ಲಿ ಕರೆದಿದ್ದ ಸಭೆಯಲ್ಲಿ 200 ಶಾಸಕರು ಭಾಗವಹಿಸಿ ಅಖಿಲೇಶ್ ಪರ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದರು. ಜೊತೆಗೆ ಕೆಲವು ಎಂಎಲ್ ಸಿ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಅಖಿಲೇಶ್ ಪರ ತಮ್ಮ ನಿಷ್ಠೆ ತೋರಿದ್ದರು.
ಸಿಎಂ ನಿವಾಸದೆದುರು ಗುಂಪು ಗೂಡಿದ ಕಾರ್ಯಕರ್ತರು ಅಖಿಲೇಶ್ ಯಾದವ್ ಉಚ್ಛಾಟನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು, ಈ ವೇಳೆ ಪೊಲೀಸರು ಮತ್ತಪ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ನಡೆದಿತ್ತು.
ಅಖಿಲೇಶ್ ಬೆಂಬಲಿಗರು ಎಸ್ ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಪಕ್ಷದ ಮುಖ್ಯ ಕಚೇರಿ ಮುಂದೆ ಎರಡು ಬಣದವರು ಸೇರಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಎಲ್ಲೆ ಬೆಳವಣಿಗೆಗಳನ್ನು ಗಮನಿಸಿದ ಮುಲಾಯಂ ಸಿಂಗ್ ಯಾದವ್ ಪಕ್ಷ ಒಡೆದು ಹೋಳಾಗುವುದನ್ನು ತಪ್ಪಿಸಲು ಉಚ್ಛಾಟನೆ ನಿರ್ಧಾರ ವಾಪಸ್ ತೆಗದುಕೊಂಡಿದ್ದಾರೆ.
ಉಚ್ಟಾಟನೆ ನಿರ್ಧಾರ ವಾಪಸ್ ತೆಗೆದು ಕೊಂಡಿರುವುದಾಗಿ ತಿಳಿಸಲು ಮುಲಾಯಂ ಸಿಂಗ್ ಯಾದವ್ ತಮ್ಮ ಸಹೋದರ ಹಾಗೂ ಎಸ್ ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಅವರಿಗೆ ಸೂಚಿಸಿದರು. ಅದರಂತೆ ಶಿವಪಾಲ್ ಯಾದವ್ ಉಚ್ಚಾಟನೆ ನಿರ್ಧಾರ ವಾಪಸ್ ತೆಗೆದುಕೊಂಡಿರುವುದನ್ನು ಟ್ವೀಟ್ ಮಾಡಿದ್ದರು.
ಅಖಿಲೇಶ್ ತಮ್ಮ ನಿವಾಸದಲ್ಲಿ ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ. ಅಲ್ಲದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ ರ್ಚಚಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಉಚ್ಚಾಟನೆ ನಿರ್ಧಾರ ವಾಪಸ್ ತೆಗೆದುಕೊಂಡಿರುವ ಎಸ್ ಪಿ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಮುಂದಿನ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸೋಣ ಎಂದು ಕರೆ ನೀಡಿದ್ದಾರೆ.
Advertisement