ನವದೆಹಲಿ: ಬಾಲಿವುಡ್ ನಟ ಅನುಪಮ್ ಖೇರ್ ಅವರ ವೀಸಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಟನಿಗೆ ವೀಸಾ ಕೊಡಿಸಲು ತಮ್ಮ ಸ್ನೇಹಿತ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಾತನಾಡಲಿ ಎಂದು ಬುಧವಾರ ಟ್ವಿಟ್ ಮಾಡಿದ್ದಾರೆ.
'ಭಾರತ ಸಹಿಷ್ಣುತಾ ದೇಶ ಎಂದು ಪ್ರಚಾರ ಮಾಡುತ್ತಿರುವ ಖೇರ್ ಅವರು ಪಾಕಿಸ್ತಾನಕ್ಕೆ ತೆರಳಲು ಉತ್ಸುಕರಾಗಿದ್ದರೆ, ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತನಿಗೆ ವೀಸಾ ಕೊಡಿಸಲು ಮತ್ತೊಬ್ಬ ಸ್ನೇಹಿತ ನವಾಜ್ ಷರೀಫ್ ಅವರೊಂದಿಗೆ ಖಂಡಿತ ಮಾತನಾಡಿಬೇಕು' ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಅನುಪಮ್ ಖೇರ್ ಅವರು ಫೆಬ್ರವರಿ 5ರಿಂದ ಕರಾಚಿಯಲ್ಲಿ ಆರಂಭವಾಗಲಿರುವ ನಾಲ್ಕು ದಿನಗಳ ಸಾಹಿತ್ಯ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ಆದರೆ ಪಾಕಿಸ್ತಾನ ಅವರಿಗೆ ವೀಸಾ ನೀಡಲು ನಿರಾಕರಿಸಿದೆ.
ಇದಕ್ಕೂ ಮುನ್ನ ಕಾಶ್ಮೀರ ಪಂಡಿತರ ಬಗ್ಗೆ ಅನುಪಮ್ ಖೇರ್ ಅವರ ಹೇಳಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅವರ ನಿಲುವು ಪಾಕ್ ವೀಸಾ ನಿರಾಕರಿಸಲು ಕಾರಣವಾಗಿರಬಹುದು ಎಂದು ತಿವಾರಿ ಹೇಳಿದ್ದರು.