
ನವದೆಹಲಿ: ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸ್ಪರ್ಧಿಗಳ ಪಟ್ಟಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಥಾಮ್ಸನ್ ರಾಯಟರ್ಸ್ ಬ್ಲಾಗ್ ನಲ್ಲಿ ಬಂದಿರುವ ವಿಶ್ಲೇಷಣೆಯನ್ನು ಉಲ್ಲೇಖಿಸಿರುವ ಹಿಂದೂಸ್ಥಾನ್ ಟೈಮ್ಸ್, ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಸ್ಪರ್ಧಿಗಳ ಪಟ್ಟಿಯಲ್ಲಿ ರವಿಶಂಕರ್ ಗುರೂಜಿ ಅವರ ಹೆಸರೂ ಸೇರಿದೆ ಎಂದು ಹೇಳಿದೆ. ನಾರ್ವೇಜಿಯನ್ ನೊಬೆಲ್ ಇನ್ಸ್ಟಿಟ್ಯೂಟ್ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮ ನಿರ್ದೇಶನಗೊಂದವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲವಾದರೂ, ನೊಬೆಲ್ ವೀಕ್ಷಕರು ಯುಎಸ್ ಗುಪ್ತಚರ ಇಲಾಖೆ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದ ಎಡ್ವರ್ಡ್ ಸ್ನೋಡೆನ್ ಹಾಗೂ ಕೊಲಂಬಿಯಾದಲ್ಲಿ ಶಾಂತಿ ನೆಲೆಸಲು ಸಂಧಾನಕಾರಾಗಿದ್ದವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕೊಲಂಬಿಯಾದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಭಾರತದ ಆಧ್ಯಾತ್ಮಿಕ ಚಿಂತಕ ರವಿಶಂಕರ್ ಪ್ರಮುಖ ಪಾತ್ರ ವಹಿಸಿದ್ದರು. 2015 ರಲ್ಲಿ ಕ್ಯೂಬಾ ಗೆ ಭೇಟಿ ನೀಡಿದ್ದ ವೇಳೆ, ಎಫ್ಎಆರ್‌ಸಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದ ರವಿಶಂಕರ್ ಕೊಲಂಬಿಯಾ ಸರ್ಕಾರ ಮತ್ತು ಎಡ ಪಂಥೀಯ ಬಂಡುಕೋರರ ನಡುವಿನ ವಿಷಮ ಪರಿಸ್ಥಿತಿಯನ್ನು ನಿವಾರಿಸುವುದಕ್ಕೆ ನೆರವು ನೀಡಿದ್ದರು. ರವಿಶಂಕರ್ ಗುರೂಜಿ ಅವರ ನೆರವಿನಿಂದ ಕೊಲಂಬಿಯಾ ಸರ್ಕಾರ ಮತ್ತು ಗೆರಿಲ್ಲಾ ಪಡೆ ಎಫ್ಎಆರ್‌ಸಿ ನಡುವೆ ಕದನ ವಿರಾಮಕ್ಕೆ ಒಪ್ಪಂದವಾಗಿತ್ತು. ರವಿಶಂಕರ್ ಅವರೊಂದಿಗಿನ ಮಾತುಕತೆಯಲ್ಲಿ ಎಫ್ಎಆರ್‌ಸಿ ನಾಯಕರು ಗಾಂಧಿ ಅವರ ಅಹಿಂಸಾ ನೀತಿಗೆ ಒಪ್ಪಿ, ರಾಜಕೀಯ ಮಾರ್ಗದಲ್ಲಿ ಬೇಡಿಕೆ ಈಡೇರಿಕೆಗೆ ಯತ್ನಿಸುವುದಾಗಿ ಹೇಳಿದ್ದರು.
ಕೊಲಂಬಿಯಾದಲ್ಲಿ ಶಾಂತಿ ನೆಲೆಸುವುದಕ್ಕೆ ನೆರವು ನೀಡಿದ್ದನ್ನು ಪರಿಗಣಿಸಿ ನೊಬೆಲ್ ಶಾಂತಿ ಪುರಸ್ಕಾರ ಸ್ಪರ್ಧಿಗಳ ಪಟ್ಟಿಯಲ್ಲಿ ರವಿಶಂಕರ್ ಅವರ ಹೆಸರೂ ಕಾಣಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement