ಪುಣೆ: ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯ ಸಂಬಂಧ ಎದ್ದಿರುವ ವಿವಾದಕ್ಕೆ ನನ್ನ ಬಳಿ ಒಂದು ಪರಿಹಾರವಿದೆ ಎಂದು ಹೇಳಿರುವ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪುರುಷರಿಗೂ ಶನಿ ಶಿಲೆ ಸ್ಪರ್ಶ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಪುರುಷ ಮತ್ತು ಮಹಿಳೆ, ಇಬ್ಬರಿಗೂ ಶನಿ ಶಿಲೆ ಸ್ಪರ್ಶ ಅವಕಾಶ ನೀಡಬಾರುದು. ದೂರ ನಿಂತು ಇಬ್ಬರು ದರ್ಶನ ಪಡೆಯಲಿ ಎಂದು ಅವರು ಹೇಳಿದ್ದಾರೆ.
ತಿರುಪತಿ ಶ್ರೀನಿವಾಸ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಲ್ಲಿ ಇದೇ ರೀತಿ ಮಾಡಲಾಗುತ್ತಿದೆ. ಪುರುಷ ಮತ್ತು ಮಹಿಳೆಯರು ಇಬ್ಬರೂ ದೂರದಿಂದಲೇ ದರ್ಶನ ಪಡೆಯುತ್ತಾರೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಬಹುದು ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ರವಿಶಂಕರ್ ಅವರ ಸಲಹೆಗೆ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಶನಿ ಶಿಲೆ ಸ್ಪರ್ಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿ ಎಂದು ಹೋರಾಟ ನಡೆಸುತ್ತಿರುವ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ, ಶನಿ ದೇವಾಲಯದ ಪೂಜಾರಿಗಳಾಗಿ ಮಹಿಳೆಯರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.